ಲಕ್ನೋ: ಹೆತ್ತವರ ಅನುಮತಿ ಇಲ್ಲದೆ ಸ್ವಯಂ ಇಚ್ಛೆಯಿಂದ ಮದುವೆಯಾಗುವ ದಂಪತಿಗಳಿಗೆ ಪೊಲೀಸ್ ರಕ್ಷಣೆ ನೀಡುವುದು ಕಡ್ಡಾಯವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಶ್ರೇಯಾ ಕೇಸರ್ವಾನಿ ಮತ್ತು ಅವರ ಪತಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ಅವರಿಂದ ಹೊರಬಂದಿದೆ.
ದಂಪತಿ, ತಮ್ಮ ವೈವಾಹಿಕ ಜೀವನದಲ್ಲಿ ಪೋಷಕರು ಹಸ್ತಕ್ಷೇಪ ಮಾಡಬಾರದು ಮತ್ತು ಪೊಲೀಸ್ ರಕ್ಷಣೆ ನೀಡಬೇಕು ಎಂಬ ಮನವಿಯನ್ನು ಸಲ್ಲಿಸಿದ್ದರು. ಆದರೆ ನ್ಯಾಯಾಲಯ, ಈ ದಂಪತಿಗೆ ಯಾವುದೇ ಗಂಭೀರ ಸ್ವರೂಪದ ಬೆದರಿಕೆ ಇಲ್ಲ ಎಂದು ಗುರುತಿಸಿ, ಅವರ ಅರ್ಜಿಯನ್ನು ವಜಾಗೊಳಿಸಿದೆ.
ನ್ಯಾಯಮೂರ್ತಿಯವರ ಅಭಿಪ್ರಾಯದಂತೆ, ಗಂಭೀರ ಬೆದರಿಕೆಯು ಇರುವ ವಿಶೇಷ ಸಂದರ್ಭಗಳಲ್ಲಿ ಮಾತ್ರ ನ್ಯಾಯಾಲಯವು ಪೊಲೀಸ್ ಭದ್ರತೆ ನೀಡಬಹುದಾಗಿದೆ. ಇತರ ಸಂದರ್ಭದಲ್ಲಿ, ಅಂತಹ ದಂಪತಿಗಳು ಸಮಾಜದಲ್ಲಿ ನಿಲ್ಲುವುದು ಕಲಿಯಬೇಕು ಎಂದಿದ್ದಾರೆ.
ಲತಾ ಸಿಂಗ್ Vs ಉತ್ತರ ಪ್ರದೇಶ ರಾಜ್ಯ ಪ್ರಕರಣದ ತೀರ್ಪು ಹಾಗೂ ಇತರ ಪೂರಕ ತೀರ್ಪುಗಳನ್ನು ಉಲ್ಲೇಖಿಸಿ, ಹೈಕೋರ್ಟ್ ಪೊಲೀಸ್ ರಕ್ಷಣೆ ನೀಡಲು ಅಗತ್ಯವಿಲ್ಲ ಎಂಬ ತೀರ್ಪು ನೀಡಿದೆ. ಈ ತೀರ್ಪು, ಪೋಷಕರ ವಿರೋಧದ ಮಧ್ಯೆ ಮದುವೆ ಮಾಡಿಕೊಂಡ ಯುವಜೋಡಿಗಳಿಗೆ ಮಹತ್ವದ ಸಂದೇಶ ನೀಡುತ್ತದೆ.