ಮುಂಬೈ: ಭಾರತೀಯ ರೈಲ್ವೆ ಮತ್ತೊಂದು ನವೀನ ಹೆಜ್ಜೆ ಇಟ್ಟಿದ್ದು, ಪ್ರಯಾಣಿಕರಿಗೆ ಚಲಿಸುವ ರೈಲಿನಲ್ಲಿಯೇ ಎಟಿಎಂ ಬಳಸಿ ಹಣ ಡ್ರಾ ಮಾಡುವ ಅವಕಾಶ ಒದಗಿಸಿದೆ. ಮುಂಬೈ-ಮನ್ಮಾಡ್ ನಡುವಿನ ಪಂಚವಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಳವಡಿಸಲಾದ ಈ ಎಟಿಎಂ ದೇಶದ ಮೊದಲ “ಚಲಿಸುವ ಎಟಿಎಂ ರೈಲು” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಭಾರತೀಯ ರೈಲ್ವೆಯ ಭುಸಾವಲ್ ವಿಭಾಗದ ಸಹಯೋಗದೊಂದಿಗೆ ಈ ಯೋಜನೆ ಜಾರಿಗೆ ಬಂದಿದ್ದು, ರೈಲಿನ ಎಸಿ ಬೋಗಿಯಲ್ಲಿ ಎಟಿಎಂ ಸ್ಥಾಪಿಸಲಾಗಿದೆ. ರೈಲು ಚಲಿಸುವಾಗಲೂ ಹಣ ಡ್ರಾ ಮಾಡುವ ವ್ಯವಸ್ಥೆ ಇದರಲ್ಲಿ ಸಿದ್ಧವಾಗಿದ್ದು, ಪ್ರಯೋಗಾತ್ಮಕ ಸಂಚಾರ ಯಶಸ್ವಿಯಾಗಿದೆ. ಇದು ಭಾರತೀಯ ರೈಲ್ವೆಯ ಶುಲ್ಕೇತರ ಆದಾಯ ಯೋಜನೆಯ (INFIRS) ಭಾಗವಾಗಿದೆ.
ಪಂಚವಟಿ ಎಕ್ಸ್‌ಪ್ರೆಸ್‌ನ 22 ಬೋಗಿಗಳ ಎಲ್ಲ ಪ್ರಯಾಣಿಕರೂ ಈ ಎಟಿಎಂ ಬಳಸಬಹುದಾಗಿದೆ. ಹಣ ಡ್ರಾ ಮಾಡುವುದರ ಜೊತೆಗೆ, ಪ್ರಯಾಣಿಕರು ಚೆಕ್‌ಬುಕ್ ಆರ್ಡರ್ ಮಾಡಬಹುದು ಹಾಗೂ ಖಾತೆಯ ವಿವರಗಳನ್ನು ಪಡೆಯಬಹುದು.
ಸುರಕ್ಷಿತತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಎಟಿಎಂ ಶಟರ್‌ನೊಂದಿಗೆ 24 ಗಂಟೆಗಳ ಸಿಸಿಟಿವಿ ಮೇಲ್ವಿಚಾರಣೆಯಲ್ಲಿದೆ. ಇಗತ್ಪುರಿ–ಕಸರಾ ನಡುವಿನ ಸುರಂಗ ಪ್ರದೇಶದಲ್ಲಿ ಕೆಲವೊಂದು ಸ್ಥಳೀಯ ನೆಟ್‌ವರ್ಕ್ ಸಮಸ್ಯೆಗಳು ಕಂಡುಬಂದರೂ, ಎಟಿಎಂ ನಿರಂತರ ಕಾರ್ಯನಿರ್ವಹಣೆಗೆ ಪ್ರಯತ್ನಿಸಲಾಗುತ್ತಿದೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಈ ಸೇವೆ ಜನಪ್ರಿಯವಾದರೆ, ಇತರ ರೈಲುಗಳಿಗೂ ವಿಸ್ತರಿಸಲಾಗುವುದು.