ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಾಲಿಗ್ರಾಮ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಕೆಡಿಪಿ ಸಭೆಗೆ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಗ್ರಾಮಗಳ ಅಭಿವೃದ್ಧಿ ಕುರಿತು ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ಸಾಲಿಗ್ರಾಮ ತಾಲೂಕಿನ ಮೇಲೂರು ಗ್ರಾ.ಪಂ ಅಧ್ಯಕ್ಷೆ ವಿಜಯರಾಮಕೃಷ್ಣೇಗೌಡ ಆರೋಪಿಸಿದರು.
ಸಾಲಿಗ್ರಾಮ ತಾಲ್ಲೂಕು ಮೇಲೂರು ಗ್ರಾಮ ಪಂಚಾಯತಿ ವತಿಯಿಂದ ಕರೆಯಲಾಗಿದ್ದ ಗ್ರಾ.ಪಂ. ವ್ಯಾಪ್ತಿಯ ಅಭಿವೃದ್ಧಿ ಪರಿಶೀಲನೆಗೆ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಗೆ ಬಹಳಷ್ಟು ಅಧಿಕಾರಿಗಳು ಗೈರಾಗಿದ್ದ ಕಾರಣ ಸಭೆ ಅಧ್ಯಕ್ಷೆ ವಿಜಯರಾಮಕೃಷ್ಣೇಗೌಡ ಅವರು ಗೈರಾದ ಅಧಿಕಾರಿಗಳಿಗೆ ನೋಟೀಸ್ ನೀಡಿ ಎಂದು ಪಿಡಿಓ ಅನಿತಾ ಅವರಿಗೆ ತಿಳಿಸಿದರು.
‘ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಹರಿಸಿ ಅಗತ್ಯ ಸೌಲಭ್ಯ ಒದಗಿಸುವುದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕರ್ತವ್ಯ. ಕುಡಿಯುವ ನೀರು, ರಸ್ತೆ, ಆರೋಗ್ಯ ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕಿದ್ದರೆ ಅಧಿಕಾರಿಗಳ ಸಭೆಗೆ ಹಾಜರಾಗಿ ಕೈಗೊಂಡಿರುವ ಅಥವಾ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಮಾಹಿತಿ ಒದಗಿಸಬೇಕು. ಆದರೆ, ಅಧಿಕಾರಿಗಳು ಸಭೆಗೆ ಹಾಜರಾಗದೆ ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ಸಮಸ್ಯೆಗಳು ಬಗೆಹರಿಯಲು ಹಾಗೂ ಸರ್ಕಾರದ ಯೋಜನೆಗಳು ಜನರಿಗೆ ತಲುಪಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು
ಮಹಿಳಾ ಮತ್ತು ಮಕ್ಕಳ ಇಲಾಖೆ , ಆರೋಗ್ಯಇಲಾಖೆ, ಪಶುಸಂಗೋಪನೆ ಇಲಾಖೆ, ರೇಷ್ಮೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಕುರಿತು ನೋಟಿಸ್ ಜಾರಿ ಮಾಡಿ ಮುಂದಿನ ಸಭೆಗೆ ಹಾಜರಿರಲಿ ಎಂದು ಸದಸ್ಯರು ಒತ್ತಾಯಸಿದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಕಂದಾಯ, ಕೆಶಿಪ್ , ಶಿಕ್ಷಣ, ಅರಣ್ಯ, ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳ ಬಗ್ಗೆ ಅಧ್ಯಕ್ಷರು ಹಾಗೂ ಸದಸ್ಯರಿಂದ ಮಾಹಿತಿ ಪಡೆದು ಕೊಂಡು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು, ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿಸಿದರು.
ಗ್ರಾ.ಪಂ ಉಪಾಧ್ಯಕ್ಷೆ ನೀಲಾವತಿ, ಸದಸ್ಯರಾದ ಮಧುಕುಮಾರ್, ವೆಂಕಟೇಶ್, ಕೆ.ವಿ.ಕುಮಾರ್, ಪುಟ್ಟಸ್ವಾಮೀಗೌಡ, ಹೇಮಲತ, ಮಹದೇವಮ್ಮ, ಗವಿರಂಗೇಗೌಡ (ಗೌತಮ್), ಹೇಮಲತ, ಸಿಬ್ಬಂದಿಗಳಾದ ಪ್ರಸನ್ನ, ಮಹೇಶ್ ಮೊದಲಾದವರು ಇದ್ದರು.