ಬೆಂಗಳೂರು: ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಜಾತಿಗಣತಿ ವರದಿ ಸಂಬಂಧ ವಿಶೇಷ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಜಾತಿಗಣತಿ ವರದಿ ಬಗ್ಗೆ ಮಹತ್ವದ ಚರ್ಚೆ ನಡೆಸಲಾಯಿತು. ಅಂತಿಮವಾಗಿ ಯಾವುದೇ ತೀರ್ಮಾನ ಕೈಗೊಳ್ಳದೇ ಮುಂದಿನ ಸಭೆಯಲ್ಲಿ ಚರ್ಚೆಗೆ ಇರಿಸಿ ಅಂತ್ಯಗೊಂಡಿರೋದಾಗಿ ತಿಳಿದು ಬಂದಿದೆ.
ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ವಿಶೇಷ ಸಚಿವ ಸಂಪುಟ ಸಭೆ ವಿಧಾನಸೌಧದಲ್ಲಿ ನಡೆಯಿತು. ಸಂಪುಟ ಸಭೆಯ ಮುಂದೆ 6 ಪುಟಗಳ ಟಿಪ್ಪಣಿಯನ್ನು ಆಯೋಗದ ಶಿಫಾರಸ್ಸುಗಳನ್ನು ಒಳಗೊಂಡು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೀಡಿತು. ಜಾತಿಗಣತಿ ವರದಿಯಲ್ಲಿರುವ ಶಿಫಾರಸ್ಸುಗಳ ಪ್ರಸ್ತಾವನೆಯನ್ನು ಸಲ್ಲಿಸಲಾಯಿತು.
ಈಗಿರುವ ಒಬಿಸಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು. ಒಬಿಸಿ ಮೀಸಲಾತಿ ಪ್ರಮಾಣ ಶೇ.32ರಿಂದ 51ಕ್ಕೆ ಹೆಚ್ಚಿಸಬೇಕು ಅಂತ ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆಯಿಂದ ವಿಶೇಷ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಮಂಡನೆ ಮಾಡಲಾಯಿತು.
ತಮಿಳುನಾಡಿನಲ್ಲಿ ಒಬಿಸಿ ಮೀಸಲಾತಿ ಶೇಕಡಾ 69ರಷ್ಟಿದೆ. ಜಾರ್ಖಂಡ್ ನಲ್ಲಿ ಹಿಂದುಳಿದ ವರ್ಗಕ್ಕೆ ಶೇ.77ರಷ್ಟು ಮೀಸಲಾತಿ ಇದೆ. ಆ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಒಬಿಸಿ ವರ್ಗಕ್ಕೆ ಮೀಸಲಾತಿ ಹೆಚ್ಚಿಸಿ ಅಂತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರಸ್ತಾವನೆಯನ್ನು ಸಂಪುಟದ ಮುಂದೆ ಇಡಲಾಯಿತು.
ಯಾವ ವರ್ಗಕ್ಕೆ ಎಷ್ಟು ಮೀಸಲಾತಿ ಹೆಚ್ಚಾಗಬೇಕೆಂದು ಕೂಡ ಪ್ರಸ್ತಾಪ ಮಾಡಲಾಗಿದೆ. ಶೇಕಡಾ 32ರಷ್ಟು ಮೀಸಲಾತಿ ಉಳಿಸಿಕೊಳ್ಳುವ ಒಂದು ಶಿಫಾರಸ್ಸು ಮಾಡಲಾಗಿತ್ತು. ಶೇ.51ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ಮತ್ತೊಂದು ಶಿಫಾರಸ್ಸು ಮಾಡಲಾಗಿತ್ತು. 32% ಮೀಸಲಾತಿ ಉಳಿಸಿಕೊಂಡರೇ ಮೀಸಲಾತಿ ಪ್ರಮಾಣ ಅದಲು ಬದಲು ಎನ್ನುವ ಬಗ್ಗೆಯೂ ಮಾಹಿತಿ ನೀಡಲಾಯಿತು.
ಪ್ರವರ್ಗ-1ಎಗೆ ಶೇ.4, ಪ್ರವರ್ಗ-1ಬಿಗೆ ಶೇ.7ರಷ್ಟು, ಪ್ರವರ್ಗ-2ಎ ಮೀಸಲಾತಿಯಲ್ಲಿ ಕಡಿತಗೊಳಿಸಬೇಕು. ಶೇ.15ರಿಂದ ಶೇ.7ಕ್ಕೆ ಕಡಿತ ಮಾಡಬೇಕೆಂಬ ಪ್ರಸ್ತಾವನೆಯನ್ನು ಇಡಲಾಗಿತ್ತು. ಪ್ರವರ್ಗ-2ಬಿ ಮುಸ್ಲೀಂರಿಗೆ ಶೇ.4ರಿಂದ 5ಕ್ಕೆ ಏರಿಕೆ ಮಾಡುವಂತೆಯೂ ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು.
ಪ್ರವರ್ಗ-3ಎಗೆ ಶೇ.4ರಷ್ಟು, 3ಬಿಗೆ ಶೇ.5ರಷ್ಟು ಮೀಸಲಾತಿ ಹಂಚಿಕೆಗೆ ಪ್ರಸ್ತಾವನೆ ಮಾಡಲಾಗಿತ್ತು. ಪ್ರವರ್ಗ-1ಎ, ಬಿ ಸೇರಿ ಎಲ್ಲಾ ಪ್ರವರ್ಗಗಳಿಗೆ ಕೆನೆಪದರ ನೀತಿ ಅಳವಡಿಕೆ ಮಾಡಬೇಕು. ಶಿಫಾರಸ್ಸಿನಂತೆ ಶೇ.51 ಮೀಸಲಾತಿ ಅಳವಡಿಸಿದ್ರೇ ಒಬಿಸಿಗೆ ಹೆಚ್ಚು ಮೀಸಲಾತಿ ಲಭ್ಯವಾಗಲಿದೆ ಎಂದಿತ್ತು.
ಕೆಲ ಸಚಿವರು ಜಾತಿಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿ ಏರು ಧ್ವನಿಯಲ್ಲೇ ಮಾತನಾಡಿದ್ದರಿಂದ ಸಚಿವರಿಂದ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸೋದಕ್ಕೂ ಸಿಎಂ ಸಿದ್ಧರಾಮಯ್ಯ ಮುಂದಾದರು. ಅಂತಿಮವಾಗಿ ಕ್ಯಾಬಿನೆಟ್ಟಿನಲ್ಲಿ ಜಾತಿಗಣತಿ ವಿಷಯ ಮುಂದೂಡಿಕೆ ಮಾಡಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗಲಿದೆ ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.