ವರದಿ: ಎಡತೊರೆ ಮಹೇಶ್
ಎಚ್.ಡಿ.ಕೋಟೆ: ಸುತ್ತಮುತ್ತಲ 12 ಜಿಲ್ಲೆಗಳಿಗಿಂತ ಎಚ್.ಡಿ.ಕೋಟೆ ತಾಲೂಕಿನಲ್ಲಿ ಅತಿ ಹೆಚ್ಚು ಅಂಬೇಡ್ಕರ್ ಭವನಗಳಿವೆ. ತಾಲೂಕಿನಲ್ಲಿ ನನ್ನ ಅವಧಿಯಲ್ಲಿ 80ಕ್ಕೂ ಹೆಚ್ಚು ಡಾ.ಬಿ.ಆರ್.ಅಂಬೇಡ್ಕರ್ ಭವನಗಳು ನಿರ್ಮಾಣಗೊಂಡಿವೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಮಾದಾಪುರ ಗ್ರಾ.ಪಂ ವ್ಯಾಪ್ತಿಯ ಹೊಳೆಹುಂಡಿ ಗ್ರಾಮದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗು ಭವನ ನಿರ್ಮಾಣಕ್ಕೆ ಶಾಸಕ ಅನಿಲ್ ಚಿಕ್ಕಮಾದು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಿಳೆಯರಿಗೆ ಹಲವು ಹಕ್ಕುಗಳನ್ನು ನೋಡಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ತಿಳಿಸಿದ್ದಾರೆ. ಅದರಂತೆಯೇ ಇಂದು ಮಹಿಳೆಯರಿಗೂ ಅಧಿಕಾರ ನೀಡಿರುವುದರಿಂದ ಗ್ರಾ.ಪಂ ಅಧ್ಯಕ್ಷೆಯಿಂದ ರಾಷ್ಟ್ರಪತಿವರೆಗೂ ಮಹಿಳೆಯರು ಅಧಿಕಾರ ನಡೆಸುತ್ತಿದ್ದಾರೆ. ಬಾಬಾ ಸಾಹೇಬರು ನೀಡಿದ ಸಂವಿಧಾನದಿಂದ ನಾನು ಶಾಸಕನಾಗಲು ಸಾದ್ಯವಾಗಿದೆ ಆದ್ದರಿಂದ ಅಂಬೇಡ್ಕರ್ ಅವರ ಕೊಡುಗೆಗಳನ್ನು ಮರೆಯಬಾರದು .ಪ್ರತಿಯೊಬ್ಬರು ಶಿಕ್ಷಣ ಪಡೆದು ತಾಲೂಕಿನಿಂದ ಹಲವಾರು ಮಕ್ಕಳು ಅಧಿಕಾರಿಗ ಳಾಗಿ ಹೊರ ಬರಬೇಕು ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ಕೆನಡಾ ದೇಶವು ಕೂಡ ಜ್ಞಾನದ ಸಂಕೇತ ದಿನ ಎಂದು ಒಂದು ದಿನದ ರಜೆ ಘೋಷಿಸಿ ಗೌರವ ನೀಡಿದೆ. ಈ ಕ್ರಮ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಹಾಗೂ ಶೋಷಿತ ಸಮುದಾಯಕ್ಕೆ ನೀಡಿದ ಗೌರವ ಎಂದು ಶ್ಲಾಘಿಸಿದರು.
ಭಾರತದಲ್ಲಿ ಜಾತೀಯತೆ ಹೆಚ್ಚಿದ್ದು, ದೇಶದಲ್ಲಿ ಬಾತೃತ್ವದ ಸಮಾಜ ನಿರ್ಮಾಣಕ್ಕೆ, ಕುವೆಂಪು ಕಂಡ ಸರ್ವ ಜನಾಂಗದ ಶಾಂತಿಯ ತೋಟದ ಸಮಾಜಕ್ಕೆ, .ಕನಕದಾಸರ ಕುಲ ರಹಿತ ಸಮಾಜಕ್ಕೆ ಶಕ್ತಿ ತುಂಬಲು ಸರ್ವ ಶ್ರೇಷ್ಠ ಸಂವಿಧಾನವನ್ನು ಬಾಬಾ ಸಾಹೇಬರು ನೀಡಿದ್ದಾರೆ ಎಂದು ತಿಳಿಸಿದರು.
ಮಹಿಳೆಯರಿಗೆ ಸಮಾನ ಗೌರವ ನೀಡಿ. ಮಹಿಳೆಯರು ಇಂದು ತಲೆ ಎತ್ತಿ ನಡೆಯುವಂತೆ ಮಾಡಿದ್ದಾರೆ. ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೆ ಅಂಬೇಡ್ಕರ್ ಅವರ ತತ್ವ ಚಿಂತನೆಗಳನ್ನು ಅಳವಡಿಸಿ ಕೊಳ್ಳಬೇಕು ಎಂದರು.
ಸಂಶೋಧಕರ ಸಂಘದ ಅಧ್ಯಕ್ಷ ಎಸ್.ಮರಿದೇವಯ್ಯ ಮಾತನಾಡಿ, ಬಾಬಾ ಸಾಹೇಬರ ಜಯಂತಿಗಳನ್ನು ಪ್ರತಿ ಹಳ್ಳಿಗಳಲ್ಲೂ ಆಚರಣೆ ಮಾಡುತ್ತಿದ್ದೇವೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಸಂವಿಧಾನದಿಂದ ಮಹಿಳೆಯರಿಗೆ ಅಧಿಕಾರ ನೀಡಲಾಗಿದೆ. ಅದರ ಪ್ರಾಮುಖ್ಯತೆಯನ್ನು ಮನೆ, ಮನೆಗಳಿಗೆ ತಿಳಿಸಬೇಕು. ಯುವ ಪೀಳಿಗೆಗೆ ಅಂಬೇಡ್ಕರ್ ತತ್ವ ಸಿದ್ದಾಂತಗಳನ್ನು ತಿಳಿಸಬೇಕು. ಅಂಬೇಡ್ಕರ್ ಅವರು ಎಲ್ಲ ಜನಾಂಗಕ್ಕೂ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಶಿಕ್ಷಣದ ಹಕ್ಕನ್ನು ಎಲ್ಲ ಜನಾಂಗ ದವರಿಗೆ ನೀಡಿ, 1947ರಲ್ಲಿ ಶಿಕ್ಷಣದ ಪ್ರಮಾಣ ಕ್ಷೀಣಿಸಿತ್ತು. 2011ರ ಗಣತಿ ಪ್ರಕಾರ ಶೇ 75ಕ್ಕಿಂತಲೂ ಹೆಚ್ಚಿನ ಶಿಕ್ಷಣ ಪಡೆದಿದ್ದೇವೆ ಇದೆಲ್ಲಾ ಸಾದ್ಯವಾದದ್ದು ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ ಎಂದರು.
ಹೆಗ್ಗನೂರು ನಿಂಗರಾಜು ತಂಡದಿಂದ ಕ್ರಾಂತಿ ಗೀತೆ ಹಾಡಿ ಸ್ವಾಗತಿಸಿದರು.
ತಹಸೀಲ್ದಾರ್ ಶ್ರೀನಿವಾಸ್, ಸರ್ಕಲ್ ಇನ್ಸ್ ಪೆಕ್ಟರ್ ಗಂಗಾಧರ್ ಮಾತನಾಡಿದರು.
ಪೊಲೀಸ್ ಇನ್ಸ್ ಪೆಕ್ಟರ್ ಚಿಕ್ಕನಾಯಕ, ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಎಚ್.ಸಿ.ನರಸಿಂಹ ಮೂರ್ತಿ, ಗ್ರಾ.ಪಂ ಅಧ್ಯಕ್ಷೆ ಸುಧಾ ಚಿಕ್ಕನಾಯಕ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜು, ಮಾಜಿ ಅಧ್ಯಕ್ಷೆ ಸವಿತಾ ರವಿ ಚಂದ್ರ, ಅಂಬೇಡ್ಕರ್ ಸಂಘದ ಅಧ್ಯಕ್ಷ ವೆಂಕಟೇಶ್, ಹೆಗ್ಗನೂರು ನಿಂಗರಾಜು, ಯೂಥ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್, ಅಝರ್, ಗ್ರಾ.ಪಂ ಮಾಜಿ ಅಧ್ಯಕ್ಷ ಮಹೇಶ್, ಗ್ರಾಮಸ್ಥರಾದ ಶಿವಮಾದಯ್ಯ ರವಿ, ದೊಡ್ಡಸ್ವಾಮಿ, ಅಂಕಯ್ಯ, ನೆನಪು ರವಿ, ಅಜಾರ್, ದಸಂಸ ಹೋರಾಟಗಾರ ಹೆಗ್ಗನೂರು ಪುಟ್ಟರಾಜು ಸೇರಿದಂತೆ ಇತರರು ಇದ್ದರು.