ರಾಂಚಿ: ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಇಂದು ಮುಂಜಾನೆ ಕೇಂದ್ರ ಮೀಸಲು ಪೊಲೀಸ್‌ನ ಕೋಬ್ರಾ ಪಡೆ ಹಾಗೂ ಪೊಲೀಸರು ಕೈಗೊಂಡ ಜಂಟಿ ಎನ್‌ಕೌಂಟರ್‌ನಲ್ಲಿ ಕನಿಷ್ಠ ಎಂಟು ನಕ್ಸಲರು ಹತರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಲಾಲ್‌ಪಾನಿಯಾ ಪ್ರದೇಶದ ಲುಗು ಬೆಟ್ಟ ಪ್ರದೇಶದಲ್ಲಿ ಮುಂಜಾನೆ 5.30ರ ಸುಮಾರಿಗೆ ಪ್ರಾರಂಭವಾದ ಗುಂಡಿನ ಚಕಮಕಿ ಇನ್ನೂ ಮುಂದುವರೆದಿದೆ. 209 ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ ಪಡೆಗಳು ಕಾರ್ಯಾಚರಣೆ ನಡೆಸಿ ಎಂಟು ಮಂದಿ ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಎರಡು INSAS ರೈಫಲ್‌ಗಳು, ಒಂದು ಸ್ವಯಂ-ಲೋಡಿಂಗ್ ರೈಫಲ್ ಮತ್ತು ಒಂದು ಪಿಸ್ತೂಲ್ ಅನ್ನು ವಶಕ್ಕೆ ಪಡೆಯಲಾಗಿದೆ. ಭದ್ರತಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಗೀಡಾದ ನಕ್ಸಲರ ಐದು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ನಕ್ಸಲೈಟ್ ವಿವೇಕ್ ತಂಡವು ಗುಂಡಿನ ಚಕಮಕಿಯಲ್ಲಿ ಭಾಗಿಯಾಗಿದೆ. ಅವರ ತಲೆಗೆ 1 ಕೋಟಿ ರೂ. ಬಹುಮಾನವಿತ್ತು ಎಂದು ಪೊಲೀಸ್ ಪ್ರಧಾನ ಕಚೇರಿ ತಿಳಿಸಿದೆ.
ಇನ್ನು ಮಾರ್ಚ್ 2026ರೊಳಗೆ ದೇಶದಲ್ಲಿ ನಕ್ಸಲ್‌ವಾದವನ್ನು ನಿರ್ಮೂಲನೆ ಮಾಡುವುದಾಗಿ ಕೇಂದ್ರ ಸರ್ಕಾರದ ಘೋಷಿಸಿತ್ತು. ಇದೀಗ ಅದರ ಭಾಗವಾಗಿ ನಡೆದ ಈ ಕಾರ್ಯಾಚರಣೆ 8 ಮಂದಿ ನಕ್ಸಲರನ್ನು ಹೊಡೆದುರುಳಿಸಲಾಗಿದೆ.