ಬೆಂಗಳೂರು: ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ವಿರುದ್ಧದ ಜಾತಿನಿಂದನೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಅಧಿಕೃತ ಅನುಮತಿ ನೀಡಿದ್ದಾರೆ.
ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಹನಿಟ್ರ್ಯಾಪ್‌ಕ್ಕೆ ಎಚ್ಐವಿ ಸೋಂಕಿತ ಮಹಿಳೆಯರನ್ನು ಬಳಸಿದ ಆರೋಪ, ಹಾಗೂ ದಲಿತರ ವಿರುದ್ಧ ಜಾತಿ ನಿಂದನೆ ಸೇರಿದಂತೆ ಗಂಭೀರ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ಹೊಣೆ ಸಿಐಡಿ ಎಸ್ಐಟಿಗೆ ನೀಡಲಾಗಿತ್ತು. ತನಿಖೆಯ ನಂತರ ಎಸ್ಐಟಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಶಾಸಕರಾಗಿರುವ ಕಾರಣ, ನ್ಯಾಯಾಂಗ ಪ್ರಕ್ರಿಯೆ ಮುಂದುವರಿಯಲು ಸ್ಪೀಕರ್‌ನ ಅನುಮತಿ ಅಗತ್ಯವಿದ್ದು, ಇದೀಗ ಖಾದರ್ ಅವರ ಅನುಮತಿಯೊಂದಿಗೆ ಕಾನೂನು ಪ್ರಕ್ರಿಯೆಗೂ ದಾರಿ ತೆರೆಯಲಾಗಿದೆ.
ಹನಿಟ್ರ್ಯಾಪ್ ವಿಚಾರ ಬಜೆಟ್ ಅಧಿವೇಶನದಲ್ಲೂ ಹದ್ದುಗಣ್ಣಿಗೆ ಬಿದ್ದಿತ್ತು. ಸಚಿವ ಕೆ.ಎನ್. ರಾಜಣ್ಣ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಬಿಜೆಪಿ ಸದನದಲ್ಲಿ ಪ್ರತಿಭಟನೆ ನಡೆಸಿತ್ತು. ಈ ಸಂದರ್ಭದಲ್ಲಿ ಆರೋಪ ಎದುರಿಸುತ್ತಿದ್ದ ಮುನಿರತ್ನ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂಬುದು ಟೀಕೆಗೆ ಕಾರಣವಾಯಿತು.
ಸದ್ಯ ಸ್ಪೀಕರ್ ಅನುಮತಿ ನೀಡಿರುವುದರಿಂದ ಕೋರ್ಟ್ ವಿಚಾರಣೆಗೆ ಹಾದಿ ಸಿದ್ಧವಾಗಿದ್ದು, ಪ್ರಕರಣ ಗಂಭೀರ ಹಂತಕ್ಕೆ ತಲುಪಿದೆ. ಇದೀಗ ರಾಜಕೀಯ ಹಾಗೂ ಕಾನೂನು ಪರಿಣಾಮಗಳತ್ತ ಎಲ್ಲರ ಗಮನ ಸೆಳೆದಿದೆ.