ಬೆಂಗಳೂರು: ಸುಳ್ಳು ಕಥೆ ರಚಿಸಿದ್ದ ವಿಂಗ್ ಕಮಾಂಡರ್ ಶಿಲಾದಿತ್ಯಾ ಬೋಸೆ ವಿರುದ್ಧ ಕೊನೆಗೂ ಎಫ್‌ಐಆರ್ ದಾಖಲಾಗಿದೆ. ಹಲ್ಲೆಗೆ ಒಳಗಾದ ವಿಕಾಸ್ ನೀಡಿದ ದೂರಿನಂತೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರು ನಂಬರ್ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109 (ಕೊಲೆಯತ್ನ), 115(2) (ಮಾರಣಾಂತಿಕ ಹಲ್ಲೆ), 304, 324, 352 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಗಂಭೀರ ಪ್ರಕರಣವಾಗಿ ಪರಿಗಣಿಸಲಾಗಿದೆ.
ವಿಕಾಸ್ ದೂರಿನಂತೆ, ಸೋಮವಾರ ಬೆಳಗ್ಗೆ ಸ್ನೇಹಿತನ ಬೈಕ್ ವಾಪಸ್ ನೀಡಲು ನಾನು ಹೋಗುತ್ತಿದ್ದೆ. ಟಿನ್ ಫ್ಯಾಕ್ಟರಿಯ ಬಳಿ ಬೈಕ್‌ಗೆ ಕಾರು ತಾಗಿದೆ. ಇದಕ್ಕೆ ಕಾರನ್ನು ಅಡ್ಡ ಹಾಕಿ ಗುದ್ದಿದ್ದು ಯಾಕೆ ಎಂದು ಕೇಳಿದೆ. ಪ್ರಶ್ನೆ ಮಾಡಿದ್ದಕ್ಕೆ ಕಾರಿನಲ್ಲಿದ್ದ ವ್ಯಕ್ತಿ ಕಾಲಿನಿಂದ ಒದ್ದು ಬೈಕನ್ನು ಕೆಳಗೆ ಬೀಳಿಸಿದ್ದಾನೆ. ನಾನು ಆಕ್ಷೇಪ ವ್ಯಕ್ತಪಡಿಸಿದಾಗ ನಿರಂತರವಾಗಿ ಹಲ್ಲೆ ಮಾಡಿದ್ದಾನೆ.
ವಿಕಾಸ್ ತನ್ನ ಸ್ನೇಹಿತನಿಗೆ ಕರೆ ಮಾಡಲು ಹೋಗುತ್ತಿದ್ದಾಗ, ಶಿಲಾದಿತ್ಯಾ ಮೊಬೈಲ್ ಎಸೆದು ನಾಶಪಡಿಸಿದ್ದಾನೆ. ಬಳಿಕ ಬೈಕ್ ಕೀ ಎಸೆದು, ಕುತ್ತಿಗೆ ಹಿಡಿದು ಕೊಲೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಘಟನೆಯು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದ್ದು, ಗಂಭೀರ ಕ್ರಮಕ್ಕೆ ಒತ್ತಾಯಿಸಲಾಗಿದೆ. ಇದೀಗ ಪೊಲೀಸರು ತನಿಖೆ ಮುಂದುವರೆಸಿದ್ದು, ಸತ್ಯ ಬಹಿರಂಗವಾಗಲಿದೆ.