ಮಂಗಳೂರು (ದಕ್ಷಿಣ ಕನ್ನಡ): ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು.ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದ್ದಾರೆ.
ಮಂಗಳೂರು ನಗರದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಲ್ಲವಾದಲ್ಲಿ ಬಿಜೆಪಿ ವತಿಯಿಂದ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದರು.
ಜನಿವಾರ ಧರಿಸುವುದು ಧಾರ್ಮಿಕ ನಂಬಿಕೆ. ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ. ಶಿವಮೊಗ್ಗ, ಬೀದರ್, ಧಾರವಾಡ ಸೇರಿದಂತೆ 4-5 ಪರೀಕ್ಷಾ ಕೇಂದ್ರಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಹೀಗಾಗಿ ಇದೊಂದು ಪೂರ್ವಯೋಜಿತ ಕೃತ್ಯದಂತೆ ಕಂಡು ಬರು ತ್ತಿದೆ ಎಂದು ಹೇಳಿದರು.
ಜನಿವಾರ ತೆಗೆಯಿಸಿದ್ದನ್ನು ಒಂದು ಜಾತಿ ಅಥವಾ ಸಮುದಾಯದ ವಿರುದ್ಧ ಕೈಗೊಂಡ ಕ್ರಮವೆಂದು ಭಾವಿಸಬಾರದು. ಇದು ಸನಾತನ ಸಂಸ್ಕೃತಿ ಮತ್ತು ನಂಬಿಕೆಗೆ ನೀಡಿದ ಹೊಡೆತವಾಗಿದೆ ಎಂದರು.
ವಿದ್ಯಾರ್ಥಿನಿಯರು ತರಗತಿ ಒಳಗೆ ಹಿಜಾಬ್ ಧರಿಸಬಾರದು ಎಂಬ ನಿಯಮವನ್ನು ಜಾರಿಗೊಳಿಸಿದ್ದನ್ನು, ಹೈಕೋರ್ಟ್ ತೀರ್ಪು ಪುರಸ್ಕರಿಸಿದರೂ ಅದನ್ನು ಸ್ಥಾಪಿತ ಹಿತಾಸಕ್ತಿಗಳು ಅಂತರ್‌ರಾಷ್ಟ್ರೀಯ ವಿವಾದವನ್ನಾಗಿಸಿದವು. ಆದರೆ ಜನಿವಾರ ತೆಗೆಯಿಸಿದ ಘಟನೆ ನಡೆದು ನಾಲ್ಕು ದಿನಗಳಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇದುವರೆಗೂ ಖಂಡಿಸಿಲ್ಲ. ಅವರು ತಕ್ಷಣವೇ ಇದಕ್ಕೆ ಪರಿಹಾರ ಕ್ರಮವನ್ನು ಸೂಚಿಸಬೇಕಿತ್ತು ಎಂದರು.