ಬೆಂಗಳೂರು: ಜಾತಿಗಣತಿ ವರದಿಯ ಗೊಂದಲ ಕುರಿತು ಮಾಜಿ ಸಂಸದ ಡಿ.ಕೆ. ಸುರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಮಾಡಿದ ಸಮೀಕ್ಷೆ ಸಂಪೂರ್ಣವಾಗಿ ಸಾರ್ವಜನಿಕರ ಮುಂದೆ ಬರುವವರೆಗೆ, ವರದಿಯ ಆಧಾರದ ಮೇಲೆ ಚರ್ಚೆ ನಡೆಯಬಾರದು ಎಂದು ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ಸಮುದಾಯಗಳನ್ನು ಸಮೀಕ್ಷೆಯಲ್ಲಿ ಕೈಬಿಡಲಾಗಿದೆ ಎಂಬ ಆರೋಪಗಳಿವೆ. ಕೈಬಿಡಲ್ಪಟ್ಟ ಸಮುದಾಯಗಳಿಗೆ ಮರುಸೇರ್ಪಡೆಗಾಗಿ 3-4 ತಿಂಗಳ ಕಾಲಾವಕಾಶ ನೀಡಬೇಕು ಎಂದರು. ವರದಿಯಲ್ಲಿನ ಜಾತಿ ಅಂಕಿ-ಅಂಶಗಳಿಗಿಂತ ಆರ್ಥಿಕ, ಶೈಕ್ಷಣಿಕ ಸ್ಥಿತಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.
ವರದಿಯ ಮಾಹಿತಿ ಅಪೂರ್ಣವಾಗಿದೆ, ಮಾಧ್ಯಮಗಳಲ್ಲಿ ಹೊರಬಂದ ಕೆಲವು ಅಂಶಗಳ ಆಧಾರದಲ್ಲಿ ಗೊಂದಲ ಉಂಟಾಗುತ್ತಿದೆ. ಕಾಂತರಾಜು ಮತ್ತು ಜಯಪ್ರಕಾಶ್ ಹೆಗ್ಡೆ ವರದಿಗಳನ್ನು ಸಂಪೂರ್ಣವಾಗಿ ಪ್ರಕಟಿಸುವಂತೆ ಅವರು ಒತ್ತಾಯಿಸಿದರು.