ಹೈದರಾಬಾದ್: ಟಾಲಿವುಡ್ ನಟ ಮಹೇಶ್ ಬಾಬುಗೆ ಜಾರಿ ನಿರ್ದೇಶನಾಲಯ (ED) ಏಪ್ರಿಲ್ 28 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಹೈದರಾಬಾದ್ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಗಳಾದ ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಈ ನೋಟಿಸ್ ಜಾರಿಯಾಗಿದೆ.
ಈ ಸಂಸ್ಥೆಗಳ ಜಾಹೀರಾತಿನಲ್ಲಿ ಅಭಿನಯಿಸಿದ್ದಕ್ಕೆ ಮಹೇಶ್ ಬಾಬು ಅವರಿಗೆ 5.9 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಇದರ ಪೈಕಿ 2.5 ಕೋಟಿ ರೂ. ನಗದಿನಲ್ಲಿ ಪಾವತಿಸಲಾಗಿದೆ ಎಂಬ ಅನುಮಾನ ಹಿನ್ನೆಲೆಯಲ್ಲಿ ಇಡಿ ವಿಚಾರಣೆ ನಡೆಸುತ್ತಿದೆ. ನಿಯಮದಂತೆ ದಿನಕ್ಕೆ 2 ಲಕ್ಷ ರೂ.ಕ್ಕಿಂತ ಹೆಚ್ಚಿನ ಮೊತ್ತವನ್ನು ನಗದಿನಲ್ಲಿ ಸ್ವೀಕರಿಸಲು ಅವಕಾಶವಿಲ್ಲ. ಇದರ ಉಲ್ಲಂಘನೆ ಆದಾಯ ತೆರಿಗೆ ಕಾಯ್ದೆ 271DA ಅಡಿಯಲ್ಲಿ ದಂಡನೀಯ.
ಸಾಯಿ ಸೂರ್ಯ ಕಂಪನಿಯ ವಿರುದ್ಧ ಅನಧಿಕೃತ ಲೇಔಟ್‌ಗಳಲ್ಲಿ ಪ್ಲಾಟ್ ಮಾರಾಟ, ಸುಳ್ಳು ಭರವಸೆಗಳ ಮೂಲಕ ಖರೀದಿದಾರರನ್ನು ವಂಚನೆ ಮಾಡಿರುವ ಆರೋಪಗಳಿವೆ. ನಟನಿಗೆ ನೀಡಲಾದ ನಗದು ಸಂಭಾವನೆ ಈ ಪ್ರಕರಣದ ಭಾಗವಾಗಿರುವ ಸಾಧ್ಯತೆ ಇರುವ ಕಾರಣ, ಇಡಿಯಿಂದ ಹೆಚ್ಚಿನ ವಿಚಾರಣೆ ಎದುರಾಗಬಹುದು.