ಮಂಡ್ಯ: ಕನ್ನಡಿಗ ಯುವಕನ ಮೇಲೆ ವಿಂಗ್ ಕಮಾಂಡರ್ ನಡೆಸಿದ ಹಲ್ಲೆ ಸಂಬಂಧ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಪ್ರತಿಕ್ರಿಯೆ ನೀಡಿದ್ದು, “ಯಾರೇ ಆಗಿರಲಿ, ತಪ್ಪು ಮಾಡಿದ್ರೆ ಕ್ರಮ ಖಚಿತ” ಎಂದು ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅದ್ದಿಹಳ್ಳಿ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ, ಈಗಾಗಲೇ ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆಯೆಂದು ತಿಳಿಸಿದರು.
ತಪ್ಪಿಗೆ ತಕ್ಕ ಶಿಕ್ಷೆ ಅನಿವಾರ್ಯ:
ಸಿದ್ದರಾಮಯ್ಯ ಮಾತನಾಡುತ್ತಾ, “ವಿಂಗ್ ಕಮಾಂಡರ್ ಆಗಿರಲಿ, ಇತರ ಯಾರೇ ಆಗಿರಲಿ, ಕಾನೂನು ಎದುರು ಎಲ್ಲರೂ ಸಮಾನ. ಹಲ್ಲೆ ಮಾಡಿದ್ದರೆ ಅದು ತಪ್ಪೇ. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ನಾನು ಸೂಚನೆ ನೀಡಿದ್ದೇನೆ,” ಎಂದು ಹೇಳಿದರು.
ಭಾಷಾ ವಿವಾದ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಟೀಕೆ:
ಈ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ಹಿಂದಿ ಹೇರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. “ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ನಾವು ಒಪ್ಪಲ್ಲ. ನಮ್ಮ ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯಲ್ಲಿದೆ — ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನೇ ನಾವು ಪ್ರಮುಖವಾಗಿ ಬಳಸುತ್ತೇವೆ. ತ್ರಿಭಾಷಾ ಸೂತ್ರವನ್ನು ನಾವು ಅನುಸರಿಸುತ್ತಿಲ್ಲ,” ಎಂದು ಸಿಎಂ ಸ್ಪಷ್ಟಪಡಿಸಿದರು.
ಪ್ರಕರಣದ ಹಿನ್ನೆಲೆ:
ವಿಂಗ್ ಕಮಾಂಡರ್ ಆದಿತ್ಯ ಬೋಸ್ ಎಂಬುವವರು, ಕೆಲ ದಿನಗಳ ಹಿಂದೆ ಬೆಂಗಳೂರಿನ ಬೈಯಪ್ಪನಹಳ್ಳಿ ಪ್ರದೇಶದಲ್ಲಿ ಒಬ್ಬ ಯುವಕನೊಂದಿಗೆ ಗಲಾಟೆ ನಡೆಸಿ, ಆತನ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ನಂತರ ಪ್ರಕರಣದಲ್ಲಿ ಟ್ವಿಸ್ಟ್ ಉಂಟಾಗಿ, ವಿಂಗ್ ಕಮಾಂಡರ್ ವಿರುದ್ಧವೇ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಪ್ರತಿಕ್ರಿಯೆ:
ಈ ಘಟನೆಯಿಂದ ರಾಜ್ಯಾದ್ಯಾಂತ ಸಾರ್ವಜನಿಕ ಆಕ್ರೋಶ ಹೆಚ್ಚಿದ್ದು, ಹಲವು ಕನ್ನಡಪರ ಸಂಘಟನೆಗಳು, “ಕನ್ನಡಿಗರ ಗೌರವವನ್ನು ಕಾಪಾಡಬೇಕು” ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡಿವೆ. ಸಿಎಂನ ಈ ನಿಲುವು ಸಾರ್ವಜನಿಕ ಅಕ್ರೋಶವನ್ನು ಶಮನಗೊಳಿಸುವತ್ತ ಒಂದು ಹಂತವಾಗಿದೆ.