ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ ಸಿ) 2024ರ ವಿವಿಧ ಕೇಂದ್ರ ಸೇವೆಗಳ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.2024ನೇ ಸಾಲಿನ ಫಲಿತಾಂಶದಲ್ಲಿ 1,009 ಅಭ್ಯರ್ಥಿಗಳು ಅರ್ಹತೆ ಪಡಿದ್ದಾರೆ. ಶಕ್ತಿ ದುಬೆ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ ದೇಶದಲ್ಲೇ ಅಗ್ರಸ್ಥಾನ ಪಡೆದಿದ್ದಾರೆ.
ಮೊದಲ 10 ಸ್ಥಾನ ಪಡೆದವರ ಪಟ್ಟಿ ಇಲ್ಲಿದೆ: ಹರ್ಷಿತಾ ಗೋಯೆಲ್, ಡೋಂಗ್ರೆ ಅರ್ಚಿತ್ ಪರಾಗ್, ಶಾ ಮಾರ್ಗಿ ಚಿರಾಗ್, ಆಕಾಶ್ ಗರ್ಗ್, ಕೊಮ್ಮಲ್ ಪುನಿಯಾ, ಆಯುಷಿ ಬನ್ಸಾಲ್, ರಾಜ್ ಕೃಷ್ಣ ಝಾ, ಆದಿತ್ಯ ವಿಕ್ರಮ್ ಅಗರ್ವಾಲ್ ಮತ್ತು ಮಾಯಾಂಕ್ ತ್ರಿಪಾಠಿ
ಟಾಪ್ 50 ರೊಳಗೆ ಸ್ಥಾನ ಪಡೆದ ರಾಜ್ಯದ ಇಬ್ಬರು: ಸಧ್ಯದ ಮಾಹಿತಿ ಪ್ರಕಾರ 50 ರೊಳಗೆ ಕರ್ನಾಟಕದ ಇಬ್ಬರು ವೈದ್ಯರು ಆಯ್ಕೆಯಾಗಿದ್ದಾರೆ. ಡಾ. ರಂಗ ಮಂಜು 24 ನೇ ಮತ್ತು ಡಾ. ಸಚಿನ್ ಹರಿಹರ್ 41 ನೇ ಸ್ಥಾನ ಪಡೆದಿದ್ದಾರೆ.
2024ರ ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯು ಜೂನ್ 16ರಂದು ನಡೆದಿತ್ತು. 9,92,599 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 5,83,213 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಮುಖ್ಯ ಪರೀಕ್ಷೆಗೆ 14,627 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇವರಲ್ಲಿ 2,845 ಅಭ್ಯರ್ಥಿಗಳು ಸಂದರ್ಶನ ಹಂತಕ್ಕೆ ಆಯ್ಕೆಯಾಗಿದ್ದರು. ಐಎಎಸ್, ಐಎಫ್‌ಎಸ್, ಐಪಿಎಸ್ ಸೇರಿದಂತೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ ವಿವಿಧ ಹುದ್ದೆಗಳಿಗೆ ಅಂತಿಮವಾಗಿ 1,009 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇವರಲ್ಲಿ 725 ಪುರುಷರು ಹಾಗೂ 284 ಮಹಿಳೆಯರು ಸೇರಿದ್ದಾರೆ.