ಬೆಂಗಳೂರು: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಗೃಹ ಸಚಿವ ಜಿ. ಪರಮೇಶ್ವರ್ ಖಂಡಿಸಿದ್ದು, ಇದನ್ನು ದೇಶದ ಶಕ್ತಿಶಾಲಿ ಗುಪ್ತಚರ ವ್ಯವಸ್ಥೆಯ ವಿಫಲತೆಯಾಗಿ ಅವರು ಸೂಚಿಸಿದರು. ಈ ದಾಳಿಯಲ್ಲಿ 27ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಇಬ್ಬರು ಕನ್ನಡಿಗರು ಸೇರಿದ್ದಾರೆ. ಭದ್ರತೆ ಹಾಗೂ ಗುಪ್ತಚರ ವ್ಯವಸ್ಥೆಯಲ್ಲಿ ಸಮಸ್ಯೆಗಳಿವೆ ಎಂದು ಅವರು ಅಭಿಪ್ರಾಯಪಟ್ಟರು.
ಭಯೋತ್ಪಾದಕರು ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು ಆತಂಕಕಾರಿಯಾಗಿದೆ. ಸಂಘಟನೆಗಳು ದಾಳಿಗೆ ಹೊಣೆ ಹೊತ್ತಿರುವುದರಿಂದ ಅವರ ವಿರುದ್ಧ ತ್ವರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕೇಂದ್ರ ಸರಕಾರ ಈ ಘಟನೆಗೆ ಗಂಭೀರವಾಗಿ ನುಡಿದು, ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಕಾಶ್ಮೀರದಲ್ಲಿ ಶಾಂತಿ ನೆಲೆಸಿದ್ದರಿಂದ ಭದ್ರತೆಯನ್ನು ಹಿಂದಕ್ಕೆ ಕರೆದುಕೊಂಡಿದ್ದರು ಎಂಬ ಮಾತುಗಳ ಬಗ್ಗೆ ಸ್ಪಷ್ಟತೆ ಇಲ್ಲದೆ ಊಹಾಪೋಹ ನಡೆಯುತ್ತಿದೆ. ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ವಿಶೇಷ ತಂಡವನ್ನು ಕಳಿಸಿದ್ದು, ಸಚಿವ ಸಂತೋಷ್ ಲಾಡ್ ಅವರು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕರ್ನಾಟಕದ ನಾಗರಿಕರಿಗೆ ಅಗತ್ಯ ರಕ್ಷಣೆ ನೀಡಲು ಸರಕಾರ ಕ್ರಮ ಕೈಗೊಂಡಿದೆ ಎಂದು ಪರಮೇಶ್ವರ್ ತಿಳಿಸಿದರು.