ಗುಂಡ್ಲುಪೇಟೆ: ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರದ ಮೂಲಕ ಖರೀದಿಸಿರುವ ಅರಿಶಿಣ ಹಣವನ್ನು ರೈತರ ಖಾತೆಗೆ ಜಮೆ ಮಾಡದ ಹಿನ್ನಲೆ ಅರಿಶಿಣ ವಾಪಸ್ ಕೊಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇವೆ ಹಾಗೂ ಅರಿಶಿಣ ಬೆಳೆಗಾರರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಹೊರ ವಲಯದ ಎಪಿಎಂಸಿ ಆವರಣದ ಮುಂದೆ ಜಮಾಯಿಸಿದ ರೈತ ಮುಖಂಡರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿ, ಎಪಿಎಂಸಿ ಕಾರ್ಯದರ್ಶಿ ಶ್ರೀಧರ್ ಗೆ ಮನವಿ ಸಲ್ಲಿಸಿ ರೈತರ ಖಾತೆಗೆ ಹಣ ಜಮಾ ಮಾಡಿಸುವಂತೆ ಒತ್ತಾಯಿಸಿದರು. ನಂತರ ಉಗ್ರಾಣ ಬಳಿ ತೆರಳಿ ಗೇಟ್ ಅಡ್ಡಲಾಗಿ ಮಲಗಿ ಅಧಿಕಾರಿಗಳು ಹಾಗೂ ಖರೀದಿ ಮಾಡಿರುವ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾನಿರತ ರೈತ ಮುಖಂಡರು, ಕಳೆದ ತಿಂಗಳು ಗುಂಡ್ಲುಪೇಟೆ ತಾಲೂಕಿನ 29 ಮಂದಿ ರೈತರ ಬಳಿ ಕ್ವಿಂಟಾಲ್ ಗೆ 6694 ರೂ.ನಂತೆ 771 ಕ್ವಿಂಟಾಲ್ ಅರಿಶಿಣವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಎಂಐಎಸ್ ಯೋಜನೆಯಡಿ ಎಂಐಪಿ ಬೆಲೆಯಲ್ಲಿ ಅರಿಶಿಣ ಖರೀದಿ ಮಾಡಿದೆ. ಆದರೆ ಆ ಹಣ ರೈತರ ಖಾತೆಗೆ ತಿಂಗಳಾದರು ಹಣ ಜಮೆ ಆಗಿಲ್ಲ. ಆದ್ದರಿಂದ ನಮ್ಮ ಅರಿಶಿಣ ವಾಪಸ್ ಕೊಡಿ ನಾವು ಬೇರೆಡೆ ಮಾರಾಟ ಮಾಡುತ್ತೇವೆ ಎಂದು ಒತ್ತಾಯಿಸಿದರು.
ಪ್ರಸ್ತುತ ಅರಿಶಿಣ ಕ್ವಿಂಟಲ್‍ಗೆ ಮಾರುಕಟ್ಟೆಯಲ್ಲಿ 12 ಸಾವಿರ ರೂ.ಕ್ಕಿಂತ ಅಧಿಕ ಬೆಲೆಯಿದೆ. ಹೀಗಿದ್ದರೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯವರು 6.694 ರೂ. ಬೆಲೆಯಲ್ಲಿ ಖರೀದಿಸಿರುವ ಹಣವನ್ನು ರೈತ ಖಾತೆಗೆ ಜಮೆ ಮಾಡಲು ಹಿಂದೇಟು ಹಾಕುತ್ತಿದೆ. ಇದರ ಮರ್ಮವೇನೆಂಬುದು ತಿಳಿಯುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಉಗ್ರಾಣ ಬಳಿ ಅರಿಶಿಣ ವಾಪಸ್ ನೀಡುವಂತೆ ತೆರಳಿದ ರೈತರಿಗೆ ಅಧಿಕಾರಿಗಳು ನಮಗೂ ಅದಕ್ಕೂ ಸಂಬಂಧವಿಲ್ಲ. ನೀವು ಸಹಕಾರ ಮಂಡಳಿಯವರ ಜೊತೆ ಮಾತನಾಡುವಂತೆ ದೂರವಾಣಿ ಮೂಲಕ ತಿಳಿಸಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾನಿರತ ರೈತ ಮುಖಂಡರು, ಅರಿಶಿಣ ವಾಪಸ್ ಕೊಡುವಂತೆ ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಅರಿಶಿಣ ಬೆಳೆಗಾರರ ಸಂಘಟನೆ ರಾಜ್ಯ ಸಂಚಾಲಕ ನಾಗಾರ್ಜುನಕುಮಾರ್, ರೈತ ಸಂಘಟನೆ ಮುಖಂಡ ಕುಂದಕೆರೆ ಸಂಪತ್ತು, ದಡದಹಳ್ಳಿ ಮಹೇಶ್ ಸೇರಿದಂತೆ ಹಲವು ಮಂದಿ ರೈತರು ಹಾಜರಿದ್ದರು.