ತಿರುವನಂತಪುರಂ: ಮಧ್ಯಪ್ರಾಚ್ಯದಲ್ಲಿ 40 ವರ್ಷಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ ವ್ಯಕ್ತಿಯೊಬ್ಬರು ಕೇರಳದಲ್ಲಿರುವ ತಮ್ಮ ಕುಟುಂಬವನ್ನು ಸೇರಿಕೊಳ್ಳಲಿದ್ದಾರೆ. ಈ ಮೂಲಕ ಅವರ ನೋವಿನ ಕಥೆಗೆ ತೆರೆ ಬೀಳಲಿದೆ. ಉತ್ತಮ ಉದ್ಯೋಗಕ್ಕಾಗಿ ಬಹ್ರೈನ್‌ಗೆ ತೆರಳಿದ್ದ 74 ವರ್ಷದ ಗೋಪಾಲನ್ ಚಂದ್ರನ್ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಲ್ಲಿಯೇ ಸಿಲುಕಿಕೊಂಡಿದ್ದರು.
ಕೇರಳದ ತಿರುವನಂತಪುರಂ ಬಳಿಯ ಪೌಡಿಕೊನಂ ಹತ್ತಿರದ ಒಂದು ಸಣ್ಣ ಗ್ರಾಮದ ನಿವಾಸಿಯಾಗಿದ್ದ ಗೋಪಾಲನ್ ಅವರು 1983ರ ಆಗಸ್ಟ್ 16ರಂದು ಉತ್ತಮ ಸಂಬಳದ ಕೆಲಸವನ್ನು ಪಡೆದು ಭಾರತದಲ್ಲಿರುವ ತಮ್ಮ ಕುಟುಂಬಕ್ಕೆ ಸಹಾಯ ಮಾಡುವ ಆಶಯದೊಂದಿಗೆ ಬಹ್ರೈನ್‌ಗೆ ತೆರಳಿದ್ದರು. ಅನೇಕ ವಲಸೆ ಕಾರ್ಮಿಕರಂತೆ, ಅವರು ಉತ್ತಮ ಜೀವನದ ಭರವಸೆ ಮತ್ತು ಹಲವು ಮಹತ್ವಾಕಾಂಕ್ಷೆಗಳೊಂದಿಗೆ ಮನೆಯಿಂದ ಹೊರಟಿದ್ದರು, ಆದರೆ ವಿಧಿ ಬೇರೆಯೇ ಯೋಜಿಸಿತ್ತು.
ಬಹ್ರೈನ್‌ಗೆ ತಲುಪಿದ ಕೆಲವೇ ದಿನಗಳಲ್ಲಿ, ಅವರ ಉದ್ಯೋಗದಾತ ಅಕಾಲಿಕವಾಗಿ ನಿಧನರಾದರು ಮತ್ತು ಅವರ ಪಾಸ್‌ಪೋರ್ಟ್ ಕಳೆದುಹೋಯಿತು. ಗೋಪಾಲನ್ ಚಂದ್ರನ್ ಅವರು ದಾಖಲೆಗಳಿಲ್ಲದವರಾದರು. ವರ್ಷಗಳು ಉರುಳಿದಂತೆ ಅವರು ಶಾಶ್ವತವಾಗಿ ಬಹ್ರೈನ್‌ನಲ್ಲಿ ಸಿಲುಕಿಕೊಂಡರು.
ಕಾನೂನುಬಾಹಿರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಗೋಪಾಲನ್ ಅವರು ತಮ್ಮ ಮರಳುವಿಕೆಯನ್ನು ಪ್ರವಾಸಿ ಲೀಗಲ್ ಸೆಲ್ (ಪಿಎಲ್‌ಸಿ) ಎಂಬ ಎನ್‌ಜಿಒ ಸಾಧ್ಯವಾಗಿಸುವವರೆಗೆ ನೆರಳಿನಲ್ಲಿಯೇ ಬದುಕುತ್ತಿದ್ದರು. ಈ ಎನ್‌ಜಿಒ ನಿವೃತ್ತ ನ್ಯಾಯಾಧೀಶರು, ವಕೀಲರು ಮತ್ತು ಪತ್ರಕರ್ತರನ್ನು ಒಳಗೊಂಡಿದ್ದು, ಭಾರತ ಮತ್ತು ವಿದೇಶಗಳಲ್ಲಿ ಅನ್ಯಾಯಕ್ಕೊಳಗಾದ ಭಾರತೀಯರಿಗಾಗಿ ಹೋರಾಡುತ್ತದೆ.
ಪಿಎಲ್‌ಸಿಯ ಬಹ್ರೇನ್ ಘಟಕದ ಅಧ್ಯಕ್ಷರಾದ ಸುಧೀರ್ ತಿರುನಿಲತ್ ಮತ್ತು ಅವರ ತಂಡವು ಬಹ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಕಿಂಗ್‌ಡಮ್‌ನ ವಲಸೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಗೋಪಾಲನ್ ಅವರು ಮರಳಿ ತಾಯ್ನಾಡಿಗೆ ಬರುವುದನ್ನು ದೃಢಪಡಿಸಿತು.
“ತಮ್ಮ ಮಗನಿಗಾಗಿ ಎದುರುನೋಡುತ್ತಿರುವ 95 ವರ್ಷದ ವೃದ್ಧ ತಾಯಿಯನ್ನು ನೋಡಲು ಗೋಪಾಲನ್ ಅಂತಿಮವಾಗಿ ಮನೆಗೆ ಮರಳುತ್ತಿದ್ದಾರೆ. ಬುಧವಾರ ಬೆಳಿಗ್ಗೆ ಅವರು ಯಾವುದೇ ವಸ್ತುಗಳಿಲ್ಲದೆ – ಕೇವಲ ನೆನಪುಗಳು, ಕಣ್ಣೀರು ಮತ್ತು ಕುಟುಂಬದೊಂದಿಗೆ ಮತ್ತೆ ಸೇರುವ ಕನಸಿನೊಂದಿಗೆ ತಾಯ್ನಾಡಿಗೆ ವಿಮಾನ ಹತ್ತಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿ ಮನೆಗೆ ಹೋಗುತ್ತಿರುವ ಕಥೆಯಲ್ಲ. ಮಾನವೀಯತೆ, ನ್ಯಾಯ ಮತ್ತು ಅವಿರತ ದಯೆ ಒಟ್ಟಿಗೆ ಸೇರಿದಾಗ ಏನಾಗುತ್ತದೆ ಎಂಬುದರ ಕಥೆ ಇದು. ಕೇಳದೆಯೇ ಉಳಿದಿರುವ ಅಸಂಖ್ಯಾತ ವಲಸಿಗರಿಗೆ ಇದು ಭರವಸೆಯ ಸಂಕೇತ. ಮನೆಗೆ ಸ್ವಾಗತ, ಗೋಪಾಲನ್. ನಿಮ್ಮನ್ನು ಎಂದಿಗೂ ಮರೆಯಲಾಗಿರಲಿಲ್ಲ,” ಎಂದು ಪಿಎಲ್‌ಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ.