ಲಂಡನ್: ಟ್ವಿಟ್ಟರ್ ಅನ್ನು ತನ್ನ ತೆಕ್ಕೆಗೆ ಪಡೆದುಕೊಂಡ ಬಳಿಕ ಎಲಾನ್ ಮಸ್ಕ್ (Elon Musk) ಈ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ನಲ್ಲಿ ಮಹತ್ವದ ಬದಲಾವಣೆ ಮಾಡುತ್ತಿದ್ದಾರೆ. ಈ ಹಿಂದೆ ಟ್ವಿಟ್ಟರ್ನಲ್ಲಿ ಹೊಸ ಫೀಚರ್ಗಳನ್ನು ತಂದು ನೂತನ ರೂಪ ನೀಡಿದ್ದ ಮಸ್ಕ್ ಇದೀಗ ಅತಿ ದೊಡ್ಡ ಬದಲಾವಣೆ ಮಾಡಿದ್ದು, ಹೊಸ ಲೋಗೋವನ್ನು ಲಾಂಚ್ ಮಾಡಿದ್ದಾರೆ.
ಟ್ವಿಟ್ಟರ್ನಲ್ಲಿ ಇದೀಗ ನೀಲಿ ಹಕ್ಕಿಯ ಲೋಗೋವಿಲ್ಲ. ಬದಲಾಗಿ ಕಪ್ಪು ಅಕ್ಷರದಲ್ಲಿ ಎಕ್ಸ್ (X) ಎಂದು ಬರೆದಿರುವ ಲೋಗೋ ಕಾಣಿಸುತ್ತಿದೆ. ಮಸ್ಕ್ ಭಾನುವಾರವಷ್ಟೆ, ಸದ್ಯದಲ್ಲೇ ಟ್ವಿಟ್ಟರ್ ಲೋಗೋ ಬದಲಾವಣೆ ಆಗಲಿದೆ ಎಂದು ಹೇಳಿದ್ದರು. ಆದರೆ, ಒಂದೇ ದಿನದಲ್ಲಿ ನೂತನ ಲೋಗೋ ಬಿಡುಗಡೆ ಮಾಡಿರುವುದು ಬಳಕೆದಾರರನ್ನು ಅಚ್ಚರಿ ಮೂಡಿಸಿದೆ. ಈ ನೂತನ ಲೋಗೋಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಟ್ವಿಟ್ವರ್‌ನ CEO, ಲಿಂಡಾ ಯಾಕರಿನೊ, ಹೊಸ ಲೋಗೋದ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಹಲವಾರು ದೊಡ್ಡ ಬದಲಾವಣೆಗಳನ್ನು ತಂದಿದ್ದಾರೆ. ಅದು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದರಿಂದ ಹಿಡಿದು ಇಂದಿನ ಲೋಗೋವನ್ನು ಬದಲಾಯಿಸುವವರೆಗೆ ನಡೆದಿದೆ.
ಇದೀಗ ನೀವು X.com ಎಂದು ಟೈಪ್ ಮಾಡಿದರೆ ಟ್ವಿಟರ್ ಪೇಜ್ ತೆರೆಯುತ್ತದೆ ಎಂದು ಎಲೋನ್ ಮಸ್ಕ್ ಹೇಳಿದ್ದಾರೆ. ಆದಾಗ್ಯೂ, ವೆಬ್‌ಸೈಟ್ ಇನ್ನೂ Twitter.com ಅನ್ನು ಪ್ರಾಥಮಿಕ ಡೊಮೇನ್ ಆಗಿ ಬಳಸುತ್ತಿದೆ. ಸಾಮಾನ್ಯವಾಗಿ ಮಸ್ಕ್ ಅವರ ಪೋಸ್ಟ್ಗೆ ಟ್ವಿಟ್ಟರ್ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತದೆ. ಅದು ಈ ಬಾರಿ ಕೂಡ ಮುಂದುವರೆದಿದೆ, ಕೆಲವರು ಈ ನೂತನ ಬದಲಾವಣೆಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರೆ, ಇನ್ನು ಕೆಲವರು “#GoodbyeTwitter” ಎಂದು ಬರೆದು ಹಳೆಯ ಲೋಗೋವನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.