ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಪ್ರದೇಶದಲ್ಲಿ ಮಂಗಳವಾರ ನಡೆದ ಭೀಕರ ಉಗ್ರರ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ನಾಗರಿಕರು ಸಾವನ್ನಪ್ಪಿದ ಘಟನೆ ದೇಶಾದ್ಯಂತ ಆಕ್ರೋಶ ಮೂಡಿಸಿದೆ. ಈ ದಾಳಿಯಲ್ಲಿ ಭಾಗಿಯಾಗಿರುವ ಮೂವರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಶಂಕಿತರ ಪತ್ತೆಗೆ ಸಹಾಯ ಮಾಡುವವರಿಗೆ ಪೊಲೀಸರು 20 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.
ಈ ಶಂಕಿತರು ಲಷ್ಕರ್-ಎ-ತೈಬಾ ಸಂಘಟನೆಯ ಸದಸ್ಯರಾಗಿದ್ದು, ಪಾಕಿಸ್ತಾನದ ಹಾಶಿಂ ಮೂಸಾ ಅಲಿಯಾಸ್ ಸುಲೇಮಾನ್, ಅಲಿ ಭಾಯಿ ಅಲಿಯಾಸ್ ತಲ್ಹಾ ಭಾಯಿ ಹಾಗೂ ಅನಂತನಾಗ್ ಮೂಲದ ಅಬ್ದುಲ್ ಹುಸೇನ್ ಥೋಕರ್ ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬುಧವಾರ ಸಿಸಿಎಸ್ ತುರ್ತು ಸಭೆ ನಡೆದಿದ್ದು, ಪಾಕಿಸ್ತಾನದ ವಿರುದ್ಧ ಐದು ಪ್ರಮುಖ ಕ್ರಮಗಳನ್ನು ಘೋಷಿಸಲಾಗಿದೆ. ಸಾರ್ಕ್ ವೀಸಾ ವಿನಾಯಿತಿಯನ್ನು ರದ್ದುಗೊಳಿಸಲಾಗಿದ್ದು, ಎಲ್ಲಾ ಪಾಕ್ ಪ್ರಜೆಗಳಿಗೆ 48 ಗಂಟೆಗಳ ಒಳಗೆ ಭಾರತ ತೊರೆಯಲು ಸೂಚಿಸಲಾಗಿದೆ. ಸಿಂಧೂ ಜಲ ಒಪ್ಪಂದವನ್ನು ಕೂಡ ಅಮಾನತುಗೊಳಿಸಲಾಗಿದೆ.