ಚಾಮರಾಜನಗರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ವಿಶೇಷ ಮುತುವರ್ಜಿಯಿಂದ ಕಾರ್ಯನಿರ್ವಹಿಸುವಂತೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನುಷ್ಠಾನಗೊಳಿಸಲಾಗುತ್ತಿರುವ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ತಲುಪಲು ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳು, ಸಂಬಂಧಪಟ್ಟ ಇತರೆ ಇಲಾಖೆ ಅಧಿಕಾರಿಗಳು ವ್ಯಾಪಕವಾಗಿ ತೊಡಗಿಕೊಳ್ಳಬೇಕು. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳ ನೋಂದಣಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ತ್ವರಿತವಾಗಿ ಆಗಬೇಕು. ಅರ್ಹರೆಲ್ಲರಿಗೂ ಯೋಜನೆ ಸೌಲಭ್ಯ ಸಿಗಬೇಕು ಎಂದರು.ನೋಂದಣಿ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಯಾವುದೇ ತಾಂತ್ರಿಕ ತೊಂದರೆಗಳು ಇನ್ನಿತರ ಸಮಸ್ಯೆಗಳಿದ್ದಲ್ಲಿ ಕೂಡಲೇ ಪರಿಹರಿಸಬೇಕು. ಜನರು ಸುಗಮವಾಗಿ ಯೋಜನೆಗೆ ನೋಂದಾಯಿಸಲು, ಅರ್ಜಿ ಸಲ್ಲಿಸಲು ತೊಡಕುಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಎನ್. ಮಂಜುನಾಥಪ್ರಸಾದ್ ಅವರು ಮಾತನಾಡಿ ನೋಂದಣಿ ಕೇಂದ್ರಗಳಿಗೆ ಬರುವ ಫಲಾನುಭವಿಗಳಿಗೆ ಮೂಲ ಸೌಕರ್ಯ ಇರಬೇಕು. ಜನಸಂದಣಿಯಾಗದಂತೆ ಶೀಘ್ರವಾಗಿ ನೋಂದಣಿ ಕಾರ್ಯ ಮಾಡಬೇಕು. ಪ್ರಜಾ ಪ್ರತಿನಿಧಿ ಸ್ವಯಂ ಸೇವಕರು ಮನೆ ಮನೆಗೆ ಹೋಗಿ ನೋಂದಣಿ ಮಾಡುವ ಪ್ರಕ್ರಿಯೆಯನ್ನು ತ್ವರಿತವಾಗಿ ನಿರ್ವಹಿಸಬೇಕು ಎಂದರು.ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಮಾತನಾಡಿ ಜಿಲ್ಲೆಯಲ್ಲಿ 270 ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ನೇರವಾಗಿಯೂ ನೋಂದಣಿ ಕೇಂದ್ರಕ್ಕೆ ಬಂದು ನೊಂದಾಯಿಸಿಕೊಳ್ಳಬಹುದು. ಈಗಾಗಲೇ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 35 ಸಾವಿರ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 28551 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ನೀಡಲಾಗಿದೆ ಎಂದರು.ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ನಗದು ವರ್ಗಾಯಿಸಲಾಗುತ್ತಿರುವ ಪ್ರಕ್ರಿಯೆ ಹಾಗೂ ಶಕ್ತಿ ಯೋಜನೆ ಅನುಷ್ಠಾನ ಬಗ್ಗೆ ಪ್ರಗತಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೆ ಯೋಜನೆಯ ಪ್ರಯೋಜನ ಪಡೆದುಕೊಂಡಿರುವ ಕುರಿತು ಮಾಹಿತಿ ಪಡೆದರು.ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಆರೋಗ್ಯ ಸೇವೆಗಳು ಜನರಿಗೆ ಸುಲಭವಾಗಿ ಸಿಗಬೇಕು. ವೈದ್ಯರು, ತಂತ್ರಜ್ಞರ ಕೊರತೆ ಇರಬಾರದು. ಜಿಲ್ಲಾ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಲಭ್ಯವಿದ್ದು ಎಲ್ಲ ವೈದ್ಯಕೀಯ ಸೌಲಭ್ಯಗಳು ದೊರೆಯಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ದೂರುಗಳು ಬಾರದಂತೆ ಸಮರ್ಪಕವಾಗಿ ಔಷಧ ಚಿಕಿತ್ಸೆಗಳು ಲಭ್ಯವಾಗಬೇಕು ಎಂದರು.
ಕೃಷಿ, ತೋಟಗಾರಿಕೆ, ರೇಷ್ಮೆ ಚಟುವಟಿಕೆಗಳು ಜಿಲ್ಲೆಯ ರೈತರಿಗೆ ಅನುಕೂಲವಾಗಬೇಕು. ರೈತರಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳಿ. ರೇಷ್ಮೆ ಬೆಳೆ ಅಭಿವೃದ್ದಿಗೆ ಎಲ್ಲಿ ಸೂಕ್ತ ಜಾಗಗಳಿವೆ, ಫಾರಂಗಳು ಲಭ್ಯವಿದೆ ಎಂಬ ಬಗ್ಗೆ ಪರಿಶೀಲಿಸಿ, ಸೌಲಭ್ಯಗಳನ್ನು ತಲುಪಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಮುಂಗಾರು ಬೇಗನೆ ಆರಂಭವಾಗಿರುವ ತಾಲೂಕುಗಳಲ್ಲಿ ಇದುವರೆಗೆ ಎಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿದೆ, ಮಳೆ ಕೊರತೆಯಿಂದ ಎಷ್ಟು ಪ್ರಮಾಣದಲ್ಲಿ ಬೆಳೆಗೆ ಹಾನಿಯಾಗಬಹುದು ಎಂಬ ಬಗ್ಗೆ ಮಾಹಿತಿ ಒದಗಿಸಬೇಕು. ರೈತರಿಗೆ ಬೆಳೆಗಾರರಿಗೆ ಇಲಾಖೆಗಳಿಂದ ಸೂಕ್ತ ಸಲಹೆ, ಮಾರ್ಗದರ್ಶನ ಮಾಡಬೇಕು ಎಂದರು.ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ ರೇಷ್ಮೆ ಬೆಳೆಗೆ ಜಿಲ್ಲೆ ಪ್ರಸಿದ್ದಿಯಾಗಿತ್ತು. ರೇಷ್ಮೆ ಮಾರುಕಟ್ಟೆಯಲ್ಲಿ ಬೆಳೆಗಾರರಿಗೆ ಅನುಕೂಲವಾಗಬೇಕು. ಕುದೇರಿನಲ್ಲಿ ಇರುವ ರೇಷ್ಮೆ ತರಬೇತಿ ಕಾಲೇಜು ಸ್ಥಗಿತವಾಗದಂತೆ ನೋಡಿಕೊಳ್ಳಬೇಕಿದೆ. ಈ ಮೂಲಕ ರೇಷ್ಮೆ ಬೆಳೆಗೆ ಉತ್ತೇಜನ ನೀಡಬೇಕಿದೆ ಎಂದರು.ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಮಾತನಾಡಿ ಕಾಡಂಚಿನ ಗ್ರಾಮಗಳಲ್ಲಿ ವಿದ್ಯುತ್ ರಸ್ತೆ, ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ. ಅರಣ್ಯ ಇಲಾಖೆಯ ತೊಡಕುಗಳಿದ್ದು ಈ ಬಗ್ಗೆ ಪ್ರತ್ಯೇಕ ಸಭೆ ಕರೆದು ವಿವರವಾಗಿ ಚರ್ಚಿಸಿದರೆ ಸಮಸ್ಯೆಗಳು ಬಗೆಹರಿಯಲಿವೆ ಎಂದು ಗಮನ ಸೆಳೆದರು.ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್ ಅವರು ಮಾತನಾಡಿ ತಮ್ಮ ಕ್ಷೇತ್ರದಲ್ಲಿ ಹಲವು ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಆಗಬಾರದು. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ಶಿಕ್ಷಕರ ನಿಯೋಜನೆಯಾಗಬೇಕಿದೆ ಎಂದರು.
ವಿಧಾನ ಪರಿಷತ್ತಿನ ಸದಸ್ಯರಾದ ಮರಿತಿಬ್ಬೇಗೌಡ ಅವರು ಮಾತನಾಡಿ ಅರಣ್ಯದಂಚಿನ ಪೋಡುಗಳಲ್ಲಿರುವ ಜನತೆಗೆ ಸಾರಿಗೆ ಸೌಲಭ್ಯವಿಲ್ಲ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಬರಲು ಕಷ್ಟಪಡಬೇಕಿದೆ. ಸ್ಥಗಿತಗೊಂಡಿರುವ ಜನವನ ಸಾರಿಗೆ ಯನ್ನು ಪುನರ್ ಆರಂಭಿಸಿ ಅದಕ್ಕೆ ಅಗತ್ಯವಿರುವ ನಿರ್ವಹಣಾ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಮಾಡಬೇಕೆಂದು ತಿಳಿಸಿದರು.ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಎನ್. ಮಂಜೇಗೌಡ ಹಾಗೂ ಡಾ. ಡಿ. ತಿಮ್ಮಯ್ಯ ಅವರು ಮಾತನಾಡಿ ರೈತರು ಬೆಳೆಗಾರರು ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪನ್ನ ಹೆಚ್ಚಳಕ್ಕೆ ಪೂರಕವಾಗಿರುವ ತರಬೇತಿ ವಿಚಾರ ಸಂಕೀರಣ ಚಟುವಟಿಕೆಗಳನ್ನು ಸಂಬಂಧಪಟ್ಟ ಇಲಾಖೆಗಳು ಹೆಚ್ಚು ಹಮ್ಮಿಕೊಳ್ಳಬೇಕು. ಇಲಾಖಾ ಕಾರ್ಯಕ್ರಮಗಳ ಕುರಿತು ಜನರಿಗೆ ವ್ಯಾಪಕವಾಗಿ ತಿಳಿವಳಿಕೆ ನೀಡಬೇಕು. ರೇಷ್ಮೆ ಬೆಳೆಯಲ್ಲಿ ಚಾಮರಾಜನಗರ ಜಿಲ್ಲೆಯೂ ಈ ಹಿಂದೆ ಹೊಂದಿದ್ದ ಪ್ರಗತಿ ಮತ್ತೆ ಕಾಣುವಂತಾಗಬೇಕು ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಅಧಿಕಾರಿ ಸಂತೋಷ್ ಕುಮಾರ್ ಇದ್ದರು.