ಮಂಗಳೂರು (ದಕ್ಷಿಣ ಕನ್ನಡ): ನಿವೃತ್ತ ಡಿಜಿಪಿ ಓಂ ಪ್ರಕಾಶ್ ರವರ ಹತ್ಯೆಯಲ್ಲಿ ಪಿಎಫ್ಐ ಪಾತ್ರ ಇರುವ ಶಂಕೆ ಇದ್ದು ಈ ಬಗ್ಗೆ ಎನ್ಐಎ ತನಿಖೆ ನಡೆಸಬೇಕು ಎಂದು ಮಾಜಿ ಡಿವೈಎಸ್ಪಿ ಅನುಪಮ ಶೆಣೈ ಒತ್ತಾಯಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಈ ಆರೋಪ ಮಾಡಿದ ಅವರು, ಮೃತರ ಪತ್ನಿ ಪಲ್ಲವಿಯವರು ಓಂ ಪ್ರಕಾಶ್ರವರಿಗೆ ವಾಟ್ಸಾಪ್ ಗ್ರೂಪ್ ನಲ್ಲಿ ಪಿಎಫ್ಐ ಜೊತೆ ನಂಟು ಇದ್ದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವಾಗ ಎಲ್ಲಾ ರೀತಿಯ ಕ್ರಿಮಿನಲ್ ಗಳ ಪರಿಚಯವಾಗಿರುತ್ತದೆ. ನಿವೃತ್ತರಾದ ಬಳಿಕ ಅವರಿಗೆ ಯಾವ ರೀತಿಯ ಸಂಪರ್ಕವಿತ್ತು ಎಂಬುದು ತಿಳಿಯಬೇಕಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಡಳಿತದಲ್ಲಿ ಪೊಲೀಸ್ ಇಲಾಖೆಯಲ್ಲಿ ನಿಷೇಧಿತ ಪಿಎಫ್ಐ ಸದಸ್ಯರನ್ನು ನೇಮಕ ಮಾಡಲಾಗಿದೆಯೇ ಎಂಬ ಪರಿಶೀಲನೆ ನಡೆಯಬೇಕು. ಇದಕ್ಕಾಗಿ ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ವಿಧಾನಸಭೆ ಸ್ಪೀಕರ್ ರನ್ನು ವಿಚಾರಣೆಗೊಳಪಡಿಸಬೇಕು ಎಂದರು.
ಮೃತರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿಯವರ ಮಾನಸಿಕ ಆರೋಗ್ಯದ ಬಗ್ಗೆ ವಿಧವಿಧವಾಗಿ ಚರ್ಚೆಯಾಗುತ್ತಿದೆ. ಪೊಲೀಸರು ಮುಖ್ಯಮಂತ್ರಿ ಮತ್ತು ಗೃಹಸಚಿವರ ಅಣತಿಯಂತೆ ತನಿಖೆ ಮಾಡುತ್ತಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಕೊಲೆಯಲ್ಲಿ ಮಗಳು ಕೃತಿಯ ಪಾತ್ರವಿಲ್ಲ ಎಂದು ಪಲ್ಲವಿಯವರು ಹೇಳಿದ್ದರೂ ಪೊಲೀಸರು ಯಾಕೆ ನಂಬುತ್ತಿಲ್ಲ. ಕೊಲೆ ಮಾಡಿರುವುದನ್ನು ನೋಡಿರುವ ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿದ್ದ ಬಗ್ಗೆ ಮಾಹಿತಿ ಇಲ್ಲ. ಯಾವುದೇ ಸಿಸಿಟಿವಿ ಫೂಟೇಜ್ ಸಿಕ್ಕಿಲ್ಲ. ಕೇವಲ ಪಲ್ಲವಿಯವರ ಹೇಳಿಕೆ ಆಧರಿಸಿ ಆಕೆಯನ್ನು ಆರೋಪಿ ಮಾಡಲಾಗಿದೆ.
ಪಲ್ಲವಿಯವರು ಹೇಳಿದಂತೆ ಓಂ ಪ್ರಕಾಶ್ ರವರಿಗೆ ನಂಟಿದ್ದ ಪಿಎಫ್ಐ ಸದಸ್ಯರೇ ಕೊಲೆ ಮಾಡಿ ಆಕೆಯನ್ನು ಬೆದರಿಸಿ ಬೇರೆ ಪೊಲೀಸ್ ಅಧಿಕಾರಿಯ ಪತ್ನಿಗೆ ಕರೆ ಮಾಡಿಸಿರಬಹುದು. ಕೊಲೆಯ ಬಗ್ಗೆ ಬಾಯಿ ಬಿಟ್ಟರೆ ಮಗಳು, ಮಗ ಮತ್ತು ಕುಟುಂಬದವರನ್ನು ನಾಶ ಮಾಡುವ ಬೆದರಿಕೆ ಹಾಕಿರಬಹುದು ಎಂದು ಆರೋಪಿಸಿದ ಅನುಪಮ ಶೆಣೈ, ಓಂ ಪ್ರಕಾಶ್ ರ ಪುತ್ರ ಕಾಂಗ್ರೆಸ್ ನೇತೃತ್ವದ ಸರಕಾರದ ಬೆದರಿಕೆ, ಆಮಿಷಕ್ಕೆ ಒಳಗಾಗದೆ ತಂದೆಯ ಸಾವಿನಿಂದ ಒಂಟಿಯಾಗಿರುವ ತಾಯಿ ಹಾಗೂ ಸಹೋದರಿಯನ್ನು ರಕ್ಷಿಸಬೇಕು ಎಂದರು.