ಮಂಡ್ಯ: ಮಂಡ್ಯ ತಾಲ್ಲೂಕಿನ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಶ್ರೀ ಭೈರವ ಕಪ್ ಕಬಡ್ಡಿ ಪಂದ್ಯಾವಳಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಪಂದ್ಯ ವೀಕ್ಷಣೆಗಾಗಿ ಜಮಾಯಿಸಿದ್ದ ಪ್ರೇಕ್ಷಕರ ಗ್ಯಾಲರಿ ಕುಸಿದು ಓರ್ವ ಪಾಪಣ್ಣಚಾರಿ ಎಂಬಾತನು ಸಾವಿಗೀಡಾಗಿದ್ದು, 13ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆ ನಿನ್ನೆ ರಾತ್ರಿ ನಡೆದಿದೆ.
ಘಟನೆಯ ಪ್ರಮುಖ ಕಾರಣವಾಗಿ ಕಡಿಮೆ ಗುಣಮಟ್ಟದ ಕಬ್ಬಿಣ ಹಾಗೂ ಸರಿಯಾದ ಇಂಟರ್‌ಲಾಕ್ ವ್ಯವಸ್ಥೆಯ ಕೊರತೆ ಉಲ್ಲೇಖಿಸಲಾಗಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಗ್ಯಾಲರಿಯಲ್ಲಿ ಕುಳಿತಿದ್ದ ಕಾರಣ ಗ್ಯಾಲರಿ ಭಾರಿ ಒತ್ತಡಕ್ಕೆ ತುತ್ತಾಗಿ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ, ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಿದರು. ಘಟನೆಯ ಬಳಿಕ ಸಚಿವ ಚಲುವರಾಯಸ್ವಾಮಿ ಮತ್ತು ಮಾಜಿ ಸಚಿವ ಪುಟ್ಟರಾಜು ಮೃತರ ಕುಟುಂಬವನ್ನು ಭೇಟಿಯಾಗಿ ಸಂತಾಪ ವ್ಯಕ್ತಪಡಿಸಿದರು. ಪುಟ್ಟರಾಜು ಅವರು ಸರ್ಕಾರದಿಂದ ಪರಿಹಾರ ನೀಡುವಂತೆ ಮನವಿ ಮಾಡಿದ್ದು, ಸಚಿವ ಚಲುವರಾಯಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಸಚಿವರು ಪ್ರತಿಕ್ರಿಯಿಸಿ, ಕಾರ್ಯಕ್ರಮಕ್ಕೆ ಪೊಲೀಸ್ ಅನುಮತಿ ಇದ್ದರೂ ಗ್ಯಾಲರಿ ಭದ್ರವಾಗಿಲ್ಲದ ಕಾರಣ ದುರಂತ ಸಂಭವಿಸಿದೆ ಎಂದರು. ಗಾಯಾಳುಗಳಿಗೆ ಉಚಿತ ಚಿಕಿತ್ಸೆ, ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.