ಬೆಂಗಳೂರು : ರಾಜ್ಯದಲ್ಲಿ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ಮೇ 2ರಂದು ಹಾಗೂ ಸಿಇಟಿ ಫಲಿತಾಂಶ ಮೇ 3ನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.
ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿದ್ದು, ಕಂಪ್ಯೂಟರ್ ದಾಖಲೀಕರಣ ಪ್ರಗತಿಯಲ್ಲಿದೆ. ಮೇ 2ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಲು ಮಂಡಳಿ ಚಿಂತನೆ ನಡೆಸಿದೆ ಎನ್ನಲಾಗಿದೆ.
ಪರೀಕ್ಷೆ-1 ರಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗದಿದ್ದರೆ ಅಥವಾ ಉತ್ತಮ ಅಂಕಗಳು ಬರದಿದ್ದರೆ ಪರೀಕ್ಷೆ- 2 ಮತ್ತು 3ರನ್ನು ಬರೆದು ಉತ್ತೀರ್ಣರಾಗಲು ಅವಕಾಶ ನೀಡಲಾಗಿದೆ. ಈ ಪರೀಕ್ಷೆಗಳು ಜೂನ್ ಮತ್ತು ಜುಲೈ ತಿಂಗಳಲ್ಲಿ ನಡೆಯಲಿವೆ. ಒಟ್ಟು 2818 ಕೇಂದ್ರಗಳಲ್ಲಿ 8.96 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದಾರೆ. 6 ವಿಷಯಗಳಿಂದ ವಿದ್ಯಾರ್ಥಿಗಳ 55 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆದಿದೆ.