ಬೆಂಗಳೂರು: ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ, ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡತ್ತಾ, ಕೊಳಕು ರಾಜಕೀಯ ಪೋಷಿಸುತ್ತಾ ಇರುವ ರಾಜ್ಯದ ಬಿಜೆಪಿ ನಾಯಕರು ಮೋದಿ ಜೀ ಅವರನ್ನು ಪ್ರಶ್ನಿಸುವ ಎದೆಗಾರಿಕೆ ತೋರುವರಾ? ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಇಂದು ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಪರೀಕ್ಷೆಗೆ ಜನಿವಾರ, ಮಾಂಗಲ್ಯ, ಕಾಲುಂಗುರ, ಕೈಬಳೆ, ತಿಲಕ ಎಲ್ಲವನ್ನು ನಿಷೇಧಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ರವರೇ ಖಂಡಿಸಿರುವುದನ್ನು ಪತ್ರಿಕೆಯಲ್ಲಿ ಓದಿದೆ ಎಂದಿದ್ದಾರೆ.
ಈ ಬಗ್ಗೆ ಬಿ.ಜೆ.ಪಿ ಅವರು ಮೋದಿ ಜೀ ಅವರನ್ನು ದೂಷಿಸಿಸುತ್ತಾರೆಯೇ? ಅಥವಾ ಮೋದಿಜೀ ಅವರಿಗೆ ಪತ್ರ ಬರೆದು ಮಾರ್ಪಾಡಿಗೆ ಕೇಳುತ್ತಾರೆಯೇ? ಇಲ್ಲ ರಾಜ್ಯದ್ಯಾಂತ ಮೋದಿ ಜೀ ಕೇಂದ್ರ ಸರ್ಕಾರದ ಈ ನಡೆಯನ್ನು ಖಂಡಿಸಿ ಚಳುವಳಿ/ ಜಾಥಾ/ ಮೆರವಣಿಗೆ ನಡೆಸುತ್ತಾರೆಯೇ ಎಂಬುದನ್ನು ಕೂತೂಹಲದಿಂದ ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಾನು ಈ ಹಿಂದೆ ನಮ್ಮ ರಾಜ್ಯದ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು CET ಪರೀಕ್ಷೆಯ ತಪಾಸಕರು ವಿದ್ಯಾರ್ಥಿಯ ಜನಿವಾರ ತೆಗೆಸಿರುವ ಪ್ರಕರಣವನ್ನು ಖಂಡಿಸಿ ಹಾಗೂ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಪರೀಕ್ಷಾ ಮಾರ್ಗ ಸೂಚಿಯ ವಸ್ತ್ರಸಂಹಿತೆ ನೀತಿಯಲ್ಲಿ ಅವಶ್ಯಕ ಬದಲಾವಣೆ ಮಾಡುವಂತೆ ಕೋರಿದ್ದೆ ಎಂದಿದ್ದಾರೆ.
ಅಂದು ಸದರಿ ಪ್ರಕರಣದಲ್ಲಿ ಬಿಜೆಪಿಗರು ವಿನಾಕಾರಣ ರಾಜಕಾರಣ ಮಾಡುತ್ತಾ, ಸಿದ್ದರಾಮಯ್ಯ ಸರ್ಕಾರದ ಕುರಿತು ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡಿದರು. ಕೇಂದ್ರ ಸರ್ಕಾರದ ಪರೀಕ್ಷಾ ಪ್ರಾಧಿಕಾರಗಳೇ ಮಾಡಿರುವ ಕಾನೂನು ಹಾಗೂ ವಸ್ತ್ರ ಸಂಹಿತೆ (Dress Code) ನಿಯಮಗಳು ಭಾರತದಾದ್ಯಂತ ಅನ್ವಯವಾಗುತ್ತವೆ. ಈ ನಿಯಮಕ್ಕೂ ಸಿದ್ದರಾಮಯ್ಯ ಸರ್ಕಾರಕ್ಕೂ ಅಥವಾ ನಿಯಮ ಪಾಲನೆ ಮಾಡಿದ ಪರೀಕ್ಷಾ ಕೇಂದ್ರದ ತಪಾಸಕರಿಗೂ ಯಾವ ರೀತಿಯ ಸಂಬಂಧವಿಲ್ಲದಿದ್ದರೂ ರಾಜಕೀಯ ತೆವಲಿನಿಂದ ದಾರಿ ದಾರಿಯಲ್ಲಿ ಬಾಯಿಬಡಿದುಕೊಂಡಿದ್ದೇ ಬಿ.ಜೆ.ಪಿ ಅವರ ಸಾಧನೆ ಅಂತ ಹೇಳಿದ್ದಾರೆ.
ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ, ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡತ್ತಾ, ಕೊಳಕು ರಾಜಕೀಯ ಪೋಷಿಸುತ್ತಾ ಇರುವ ರಾಜ್ಯದ ಬಿಜೆಪಿ ನಾಯಕರು ಮೋದಿ ಜೀ ಅವರನ್ನು ಪ್ರಶ್ನಿಸುವ ಎದೆಗಾರಿಕೆ ತೋರುವರಾ? ಎಂದು ರಾಜ್ಯದ ಜನರು ನಿರೀಕ್ಷಿಸುತ್ತಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.