ಮಂಗಳೂರು (ದಕ್ಷಿಣ ಕನ್ನಡ): ಕೇಂದ್ರ ಸರಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂ.ಗಳಿಗೆ ಏರಿಕೆ ಮಾಡಿರುವುದು ಸೇರಿದಂತೆ ಕೇಂದ್ರದ ಬೆಲೆ ಏರಿಕೆ ವಿರುದ್ಧ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕಟ್ಟಿಗೆ, ಖಾಲಿ ಗ್ಯಾಸ್ ಸಿಲಿಂಡರ್ ಜತೆ ಮೆರವಣಿಗೆ ನಡೆಸಿ ಪ್ರತಿಭಟಿಸಿದರು. ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ನಡೆದ ಮೆರವಣಿಗೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ, ಭಿತ್ತಿ ಪತ್ರ ಪ್ರದರ್ಶಿಸುತ್ತಾ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿದರು.
ಮಿನಿ ವಿಧಾನ ಸೌಧದ ಎದುರು ನಡೆದ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೇಂದ್ರದಲ್ಲಿ ಕಳೆದ 11 ವರ್ಷಗಳಿಂದ ಎನ್‌ಡಿಎ ಸರಕಾರವಿದೆ. ಅದಕ್ಕೆ ಹಿಂದಿದ್ದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರಲ್‌ಗೆ 141 ಡಾಲರ್ ಇದ್ದ ಸಂದರ್ಭದಲ್ಲಿಯೂ ಪೆಟ್ರೋಲ್ ಬೆಲೆ 60 ರೂ. ನಲ್ಲಿ ಸಿಗುತ್ತಿತ್ತು. ಗ್ಯಾಸ್ ದರ 480 ರೂ. ಗಳಾಗಿತ್ತು. ಆದರೆ ಇದೀಗ ಕಚ್ಚಾತೈಲ ಬೆಲೆ 64 ಡಾಲರ್‌ಗೆ ಇಳಿಕೆಯಾಗಿದ್ದರೂ ಪೆಟ್ರೋಲ್ ಬೆಲೆ, ಡೀಸೆಲ್ ಬೆಲೆ ಇಳಿಕೆಯಾಗಿಲ್ಲ. ಬದಲಾಗಿ ಈಗಾಗಲೇ ಹಲವು ಬಾರಿ ಏರಿಕೆ ಮಾಡಿರುವ ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯನ್ನೂ ಇತ್ತೀಚೆಗೆ 50 ರೂ. ಗಳಿಗೆ ಏರಿಕೆ ಮಾಡಿದೆ. ಕರ್ನಾಟಕ ಸರಕಾರ 2 ರೂ. ದರ ಹೆಚ್ಚಿಸಿದರೆ ಜನಾಕ್ರೋಶ ವ್ಯಕ್ತಪಡಿಸುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಹೇಳಿದರು.