ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕೋಮು ದ್ವೇಷ ಭಾಷಣದ ಆರೋಪ ಕೇಳಿಬಂದಿದೆ. ಶನಿವಾರ, ತೆಕ್ಕಾರಿನ ಭಟ್ರಬೈಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಅವರು ಮಾತನಾಡಿದ ಸಂದರ್ಭದಲ್ಲಿ, ಗ್ರಾಮದ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹಾಗೂ ದ್ವೇಷಭರಿತ ಭಾಷಣ ಮಾಡಿದ ಆರೋಪವಾಗಿದೆ. ಶಾಸಕರು “ತೆಕ್ಕಾರಿನ ಕಂಟ್ರಿ ಬ್ಯಾರಿಗಳು ಬ್ರಹ್ಮಕಲಶೋತ್ಸವಕ್ಕೆ ಹಾಕಿದ ಟ್ಯೂಬ್ ಲೈಟನ್ನು ಹೊಡೆದು ಹಾಕುತ್ತಾರೆ” ಹಾಗೂ “ಡೀಸೆಲ್ ಕದಿಯುತ್ತಾರೆ” ಎಂಬಂತಹ ಹೇಳಿಕೆಗಳನ್ನು ನೀಡಿದ್ದು, ಈ ಮೂಲಕ ಕೋಮು ಸೌಹಾರ್ದತೆ ಕೆಡಿಸುವ ಪ್ರಯತ್ನ ನಡೆದಿದೆಯೆಂಬ ಆರೋಪವಿದೆ.
ಈ ಕುರಿತು ಎಂ.ಎಸ್. ಇಬ್ರಾಹಿಂ ಎಂಬುವವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಸ್ತುತ 163 ಸೆಕ್ಷನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಶಾಸಕರ ವಿರುದ್ಧ ಬಿಎನ್‌ಎಸ್ ಕಾಯ್ದೆ ಕಲಂ 196 ಮತ್ತು 353(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ದಕ್ಷಿಣ ಕನ್ನಡದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಕುತೂಹಲವನ್ನು ಉಂಟುಮಾಡಿದೆ.