ಕೆ.ಆರ್.ನಗರ : ದೇವಾಲಯಗಳ ನಿರ್ಮಾಣದಿಂದ ಗ್ರಾಮಗಳಲ್ಲಿ ಸಹಬಾಳ್ವೆ ಮತ್ತು ಸಹೋದರತೆ ಗಟ್ಟಿಯಾಗಲು ಸಹಕಾರಿಯಾಗುತ್ತದೆ ಆದರಿಂದ ಪ್ರತಿ ಗ್ರಾಮಗಳಲ್ಲಿ ದೇವಾಲಯಗಳ ನಿರ್ಮಾಣ ಮತ್ತು ಪುನಶ್ಚೇತನವಾಗಬೇಕು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಅರ್.ನಗರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಬಸವೇಶ್ವರ ದೇವಾಲಯದ ಉದ್ದಾಟನೆ ನೆರವೇರಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇವಾಲಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು ಅವುಗಳು ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುತ್ತಿವೆ ಎಂದರು.
ಮನುಷ್ಯನ ಒತ್ತಡದ ದಿನಗಳಲ್ಲಿ ನೆಮ್ಮದಿ ಅವಶ್ಯಕತೆಯಿದ್ದು ಇಂತಹ ಧಾರ್ಮಿಕ ಕಾರ್ಯಗಳಿಂದ ಗ್ರಾಮಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಣಬಹುದು ಈ ನಿಟ್ಟಿನಲ್ಲಿ ಸಿದ್ದಾಪುರ ಗ್ರಾಮದ ಯುವಕರು ಸ್ವಯಂ ಪ್ರೇರಿತವಾಗಿ ಮತ್ತು ಜವಬ್ದಾರಿಯಿಂದ ದೇವಾಲಯ ನಿರ್ಮಾಣ ಮಾಡಿದ್ದಾರೆ ಎಂದು ನುಡಿದರು. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ದೇವಾಲಯ ನಿರ್ಮಾಣ ಮಾಡಲಾಗಿದ್ದು ಬಸವೇಶ್ವರ ದೇವಾಲಯ ನಿರ್ಮಾಣಕ್ಕೆ ಗ್ರಾಮದ ಎಲ್ಲಾ ಮುಖಂಡರು ಮತ್ತು ಯುವಕರು ಸಹಕಾರ ಮತ್ತು ಸಹಾಯ ಮಾಡಿರುವುದರಿಂದ ಕೇವಲ ಆರು ತಿಂಗಳಿನಲ್ಲಿ ದೇವಾಲಯ ನಿರ್ಮಾಣ ಮಾಡಲು ಸಾಧ್ಯವಾಗಿದೆ ಆದರಿಂದ ಗ್ರಾಮದ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಸಿದ್ದಾಪುರ- ಹೊಸಕೊಪ್ಪಲು ಗೇಟ್ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಈಗಾಗಲೇ ಕ್ರಮ ಕೈಗೊಂಡಿದ್ದು ಶೀಘ್ರದಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದ ಶಾಸಕರು ಗ್ರಾಮ ಪರಿಮಿತಿಯ ಎಲ್ಲಾ ರಸ್ತೆಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿ ಪಡಿಸಿ ನಿಮ್ಮ ಋಣ ತೀರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕೆ.ಆರ್.ನಗರ ಪಟ್ಟಣದ ಪುರಸಭೆ ವೃತ್ತದಿಂದ ಮಾವತ್ತೂರು ಗ್ರಾಮದವರೆಗೆ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸಲು 30 ಕೋಟಿ ಅನುದಾನ ನೀಡುವಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿಯವರಿಗೆ ಮನವಿ ಸಲ್ಲಿಸಲಾಗಿದ್ದು ಅವರು ಮುಂದಿನ ಜೂನ್ ತಿಂಗಳೊಳ್ಳಗೆ ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಸಿದ್ದಾಪುರ, ಬ್ಯಾಡರಹಳ್ಳಿ, ಮಾವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣ ಮಾಡಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಾಗುತ್ತದೆ ಎಂದ ಶಾಸಕ ಡಿ.ರವಿಶಂಕರ್ ಸಿದ್ದಾಪುರ ಗ್ರಾಮದ ಗ್ರಾಮಸ್ಥರ ಬೇಡಿಕೆಯಂತೆ ಕುರ್ಚ್ ನಿರ್ಮಾಣ ಮಾಡಲಾಗುತ್ತದೆಂದರು.
ಈ ಸಂದರ್ಭದಲ್ಲಿ ಶಾಸಕ ಡಿ.ರವಿಶಂಕರ್ ಮತ್ತು ದಂಪತಿಯನ್ನು ಗ್ರಾಮಸ್ಥರು ಬೆಳ್ಳಿ ಕಿರಿಟ ನೀಡಿ ಗೌರವಿಸಲಾಯಿತು. ಶಾಸಕ ಡಿ.ರವಿಶಂಕರ್ ಪತ್ನಿ ಸುನೀತಾ, ಗ್ರಾಮದ ಮುಖಂಡರಾದ ಎಸ್.ಪಿ.ತ್ಯಾಗರಾಜು, ಜಯಪ್ರಕಾಶ್, ಎಸ್.ಪಿ.ವೆಂಕಟೇಶ್, ಎಸ್.ಎಂ.ಪ್ರಸನ್ನ, ನಾಗರಾಜು, ಶಿವಣ್ಣಾಚಾರ್, ನಟರಾಜು, ಲಕ್ಷ್ಮೀನಾರಾಯಣ, ದೊಡ್ಡೇಗೌಡ, ಗಾಯನಸುಬ್ರಮಣ್ಯ, ಕಲಾವತಿರಾಜಮುಡಿ, ಸುರೇಶ್, ಅಭಿ, ದೊರೆಸ್ವಾಮಿಸೇರಿದಂತೆ ಇನ್ನಿತರರು ಹಾಜರಿದ್ದರು.