ನವದೆಹಲಿ: ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ಭಾರತ ಬುಧವಾರ ಬೆಳಗಿನ ಜಾವ ‘ಆಪರೇಷನ್ ಸಿಂಧೂರ್’ ಆರಂಭಿಸಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ. ಭಾರತೀಯ ಸಶಸ್ತ್ರ ಪಡೆಗಳು ಈ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಕ್ಷಿಪಣಿಗಳ ಸಹಾಯದಿಂದ ನಿಖರ ದಾಳಿ ನಡೆಸಿವೆ.
ಈ ದಾಳಿಯು ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ನಡೆಸಲಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಕಾರ್ಯಾಚರಣೆಯನ್ನಾದ್ಯಂತ ಮೇಲ್ವಿಚಾರಣೆ ಮಾಡಿದರು. ಆಪರೇಷನ್‌ನಲ್ಲಿ ಗುರಿಯಾಗಿದ್ದ ಒಂಬತ್ತು ತಾಣಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿದ್ದು, ಐದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿವೆ.
ದಾಳಿಗೆ ಗುರಿಯಾದ ಸ್ಥಳಗಳಲ್ಲಿ ಜೈಶ್-ಎ-ಮೊಹಮ್ಮದ್‌ನ ನೆಲೆಗಳಿರುವ ಬಹವಾಲ್ಪುರದ ಮರ್ಕಜ್ ಸುಭಾನ್ ಅಲ್ಲಾ ಮಸೀದಿ, ತೆಹ್ರಾ ಕಲಾನ್‌ನ ಸರ್ಜಾಲ್, ಕೋಟ್ಲಿಯ ಮರ್ಕಜ್ ಅಬ್ಬಾಸ್ ಮತ್ತು ಮುಜಫರಾಬಾದ್‌ನ ಸೈಯದ್ನಾ ಬಿಲಾಲ್ ಕ್ಯಾಂಪ್ ಸೇರಿವೆ. ಲಷ್ಕರ್-ಎ-ತಯಬಾ ಉಗ್ರರ ಶಿಬಿರಗಳಿರುವ ಮುರ್ಡಿಕೆಯಲ್ಲಿ ಮರ್ಕಜ್ ತೈಬಾ, ಬರ್ನಾಲಾದ ಮರ್ಕಜ್ ಅಹ್ಲೆ ಹದಿತ್ ಹಾಗೂ ಮುಜಫರಾಬಾದ್‌ನ ಶ್ವವಾಯಿ ನಲ್ಲಾ ಮೇಲೆಯೂ ದಾಳಿ ನಡೆಸಲಾಗಿದೆ.
ಮಧ್ಯರಾತ್ರಿ 1.44ರ ಹೊತ್ತಿಗೆ ಈ ಕಾರ್ಯಾಚರಣೆ ಆರಂಭವಾಯಿತು. ಭಾರತೀಯ ಸೇನೆಯು ಯಾವುದೇ ಪಾಕಿಸ್ತಾನಿ ಮಿಲಿಟರಿ ತಾಣಗಳನ್ನು ಗುರಿಯಾಗಿಸದೆ, ಭಯೋತ್ಪಾದಕರ ನೆಲೆಗಳನ್ನಷ್ಟೆ ನಿಖರವಾಗಿ ನಾಶಪಡಿಸಿದೆ.