ಬೆಂಗಳೂರು: ಪಾಕಿಸ್ತಾನದ ವಿರುದ್ಧ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ವಿಮಾನ ನಿಲ್ದಾಣ ಹಾಗೂ ಅಣೆಕಟ್ಟುಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಹೆಮ್ಮೆ ಇದೆ. ದೇಶದ ಹಿತಕ್ಕೆ ನಾವೆಲ್ಲ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದೇವೆ. ನಮಗೆ ಕೇಂದ್ರ ಸರ್ಕಾರದಿಂದ ನಾಗರೀಕ ಸುರಕ್ಷತಾ ಕ್ರಮ ಹೇಗೆ ಕೈಗೊಳ್ಳಬೇಕು ಎಂಬ ಬಗ್ಗೆ ಸೂಚನೆ ಬಂದಿದೆ ಎಂದರು.
ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಅಣೆಕಟ್ಟುಗಳು ಹಾಗೂ ವಿಮಾನ ನಿಲ್ದಾಣಗಳಿಗೆ ಹೆಚ್ಚಿನ ಭದ್ರತೆ ಒದಗಿಸಿದ್ದೇವೆ. ಕೇಂದ್ರದ ಗುಪ್ತಚರ ಇಲಾಖೆಯ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇವೆ ಎಂದರು. ನಾಗರೀಕ ಸುರಕ್ಷತೆಗಾಗಿ ಇಂದು ಸಂಜೆ 4 ಗಂಟೆಗೆ ಮಾಕ್ ಡ್ರಿಲ್ ನಡೆಯಲಿದೆ. ಜಿಲ್ಲಾ ಕೇಂದ್ರಗಳಿಗೂ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು.