ಮಂಗಳೂರು (ದಕ್ಷಿಣ ಕನ್ನಡ) :ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತನು ಕರುಣಿಸಲು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಝ್ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಅವರು ತಿಳಿಸಿದ್ದಾರೆ.

ಭಾರತೀಯ ಸೇನೆಯು ಉಗ್ರನೆಲೆಗಳನ್ನು ಧ್ವಂಸ ಮಾಡುವ ಮೂಲಕ ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರ ತೀರಿಸಿದೆ. ಭಾರತದ ನೆಮ್ಮದಿಗೆ ಭಂಗ ತರಲು ಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಬುದ್ದಿ ಕಲಿಸಿದೆ. ಭಾರತೀಯರ ಮೇಲೆ ಯಾವುದೇ ದಾಳಿ ನಡೆದರೂ ಅದನ್ನು ಹಿಮ್ಮೆಟ್ಟಿಸಲು ದೇಶ ಸನ್ನದ್ಧವಾಗಿದೆ ಎಂಬ ಸಂದೇಶವನ್ನು ಈ ಸೇನಾ ಕಾರ್ಯಾಚರಣೆ ತೋರಿಸಿಕೊಟ್ಟಿದೆ. ಇದಕ್ಕಾಗಿ ಸೇನೆಯನ್ನು ಅಭಿನಂದಿಸಿ, ವಿಶೇಷ ಪ್ರಾರ್ಥನೆ ಮಾಡಲು ಅವರು ಪ್ರಕಟಣೆಯಲ್ಲಿ ಇಂದು ತಿಳಿಸಿದ್ದಾರೆ.