ಶ್ರೀನಗರ: ಪಾಕಿಸ್ತಾನ ದಾಳಿಗೆ ಭಾರತ ಪ್ರತಿದಾಳಿಯನ್ನು ನಡೆಸುತ್ತಿದೆ. ಇಷ್ಟಾದರೂ ಪಾಕ್ ಬುದ್ಧಿ ಕಲಿಯದೆ ಮತ್ತೆ ಪಾಕ್ ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ವಸತಿ ಕಟ್ಟಡದ ಮೇಲೆ ಶನಿವಾರ ಮುಂಜಾನೆ ಶೆಲ್ ದಾಳಿಯನ್ನು ನಡೆಸಿದೆ. ಈ ದಾಳಿಯಲ್ಲಿ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ರಾಜೌರಿ ಪಟ್ಟಣದಲ್ಲಿರುವ ಹೆಚ್ಚುವರಿ ಉಪ ಆಯುಕ್ತ (ರಾಜೌರಿ) ರಾಜ್ ಕುಮಾರ್ ಥಾಪಾ ಅವರ ಅಧಿಕೃತ ನಿವಾಸಕ್ಕೆ ಫಿರಂಗಿ ಶೆಲ್ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಅವರೊಂದಿಗಿದ್ದ ಇಬ್ಬರು ಸಿಬ್ಬಂದಿಗಳಿಗೂ ಗಾಯಗಳಿವೆ. ರಾಜ್ ಕುಮಾರ್ ಥಾಪಾ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನು ಗಾಯಗೊಂಡಿರುವ ಇಬ್ಬರು ಸಿಬ್ಬಂದಿಗಳ ಸ್ಥಿತಿ ಗಂಭೀರವಾಗಿದೆ. ಇದೀಗ ಈ ಹಿರಿಯ ಅಧಿಕಾರಿಯ ಸಾವಿಗೆ ಜಮ್ಮು-ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಸಿಎಂ ಒಮರ್ ಅಬ್ದುಲ್ಲಾ ಅವರು, “ಇದೊಂದು ಆಘಾತಕಾರಿ ಸುದ್ದಿ, ನಿನ್ನೆಯಷ್ಟೇ ನಾನು ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯ ಬಗ್ಗೆ ಚರ್ಚೆಯನ್ನು ನಡೆಸಿದ್ದೆ. ಜಿಲ್ಲೆಯಾದ್ಯಂತ ಉಪ ಮುಖ್ಯಮಂತ್ರಿಯೊಂದಿಗೆ ಅವರು ಕೂಡ ಅಲ್ಲಿದ್ದರು. ನನ್ನ ಅಧ್ಯಕ್ಷತೆಯಲ್ಲಿ ಆನ್‌ಲೈನ್ ಚರ್ಚೆಗಳನ್ನು ಕೂಡ ನಡೆಸಲಾಗಿತ್ತು. ಈ ಚರ್ಚೆಯಲ್ಲಿ ಅವರು ಕೂಡ ಭಾಗಿಯಾಗಿದ್ದರು. ಆದರೆ ಇಂದು ಬೆಳಿಗ್ಗೆ ಪಾಕ್ ರಾಜೌರಿ ಪಟ್ಟಣವನ್ನು ಗುರಿಯಾಗಿಸಿಕೊಂಡು ನಮ್ಮ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ಶ್ರೀ ರಾಜ್ ಕುಮಾರ್ ಥಾಪ್ಪಾ ಅವರ ಮನೆಯ ಮೇಲೆ ಶೆಲ್ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಈ ಭೀಕರ ಆಘಾತದ ಬಗ್ಗೆ ಮತ್ತು ದುಃಖವನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಪೋಸ್ಟ್ ಮಾಡಿದ್ದಾರೆ.