ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವಂತೆಯೇ, ಮುಂಬರುವ ದಿನಗಳಲ್ಲಿ ಎಟಿಎಂ ಬಂದ್ ಆಗುವ ಸಾಧ್ಯತೆಯಿದೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಈ ವದಂತಿಗಳನ್ನು ಶುಕ್ರವಾರ ತಳ್ಳಿ ಹಾಕಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ನಮ್ಮ ಎಟಿಎಂಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ಸಂಗ್ರಹ ಕೂಡಾ ಉತ್ತಮವಾಗಿದ್ದು, ಡಿಜಿಟಲ್ ಸೇವೆಗಳು ಸುಗಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿವೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಭಾರತದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ, ನಮ್ಮ ಎಲ್ಲಾ ಎಟಿಎಂ, ಸಿಡಿಎಂಎಸ್/ಎಡಿಡಬ್ಲ್ಯೂಎಂಎಸ್ ಮತ್ತು ಡಿಜಿಟಲ್ ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಬಳಕೆಗೆ ಲಭ್ಯವಿರುವುದಾಗಿ ತಿಳಿಸಿದೆ. ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೂಡಬೇಡಿ ಎಂದು ತನ್ನ ಗ್ರಾಹಕರಿಗೆ ಎಸ್‌ಬಿಐ ಹೇಳಿದೆ.
ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮತ್ತು ಪಂಜಾಬ್, ಸಿಂಧಿ ಬ್ಯಾಂಕ್ ಕೂಡಾ ಇದೇ ರೀತಿಯ ಸಂದೇಶವನ್ನು ಫೋಸ್ಟ್ ಮಾಡಿವೆ. ಸ್ಥಳೀಯ ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಹಾಗೂ ಎಚ್ಚರಿಕೆಯಿಂದ ಇರುವಂತೆ ಗಡಿ ರಾಜ್ಯಗಳ ತನ್ನ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎ. ಮಣಿಮೇಖಲೈ ಹೇಳಿದ್ದಾರೆ.
ಎಲ್ಲಾ ಬ್ಯಾಂಕ್ ಗಳಲ್ಲಿ ಸೂಕ್ತ ಹಣವನ್ನು ಸಂಗ್ರಹಿಸಲಾಗಿದ್ದು, ಎಟಿಎಂಗಳ ಕಾರ್ಯನಿರ್ವಹಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಅವರು ತಿಳಿಸಿದ್ದಾರೆ. ಎಲ್ಲಾ ಎಟಿಎಂಗಳು ಎಂದಿನಂತೆ ಸುಗಮವಾಗಿ ಕಾರ್ಯನಿರ್ವಹಿಸುತ್ತಿವೆ. ವದಂತಿಗಳನ್ನು ನಂಬಬೇಡಿ, ಯಾವಾಗಲೂ ನಿಮ್ಮ ಸೇವೆಯಲ್ಲಿ ಬ್ಯಾಂಕ್ ಇರುತ್ತದೆ. ನಿಮ್ಮ ಹಣ ನಮ್ಮಲ್ಲಿ ಸುರಕ್ಷಿತವಾಗಿದೆ ಎಂದು ಕೆನರಾ ಬ್ಯಾಂಕ್ ಫೋಸ್ಟ್ ಮಾಡಿದೆ.