ಯಳಂದೂರು: ಶನಿವಾರ ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ೫ ಗಂಟೆಯಿಂದಲೇ ವಿವಿಧ ಧಾರ್ಮಿಕ ವಿಧಿಗಳು ನಡೆದವು. ಮೊದಲಿಗೆ ಕಲ್ಯಾಣೋತ್ಸವ, ಪ್ರಸ್ಥಾನ ಮಂಟಪೋತ್ಸವಗಳ ಅಲಂಕಾರ ಮಾಡಲಾಗಿತ್ತು. ದೇವರಿಗೆ ತುಳಸಿ ಸೇರಿದಂತೆ ವಿವಿಧ ಬಣ್ಣಬಣ್ಣದ ಹೂವುಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಬೆಳಿಗ್ಗೆ ನಂತರ ಬೆಳಿಗ್ಗೆ ೧೧:೦೨ಗಂಟೆ ಮೇಲೆ ೧೧:೧೫ ಗಂಟೆ ಒಳಗೆ ಸಲ್ಲುವ ಶುಭ ಕರ್ಕಾಟಕ ಲಗ್ನದ ಕನ್ಯಾ ಬುಧ ನಾವಾಂದ ಮೂಹೂರ್ತದಲ್ಲಿ ವಿಶೇಷ ಚಿನ್ನಾಭರಣಗಳಿಂದ ಅಲಂಕೃತವಾದ ದೇವರ ಉತ್ಸವ ಮೂರ್ತಿಗಳನ್ನು ರಥದ ಒಳಗೆ ಇರಿಸಲಾಯಿತು. ಸಾವಿರಾರು ಭಕ್ತರು ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು.
ತೇರು ಆರಂಭಗೊಳ್ಳುವ ಮುಂಚೆ ರಥದ ಮೇಲ್ಭಾಗದಲ್ಲಿರುವ ಆಗಸದಲ್ಲಿ ಗರುಡ ಪಕ್ಷಿಯು ಹಾರುವ ಪ್ರತೀತಿ ಇದ್ದು. ಇಂದೂ ಕೂಡ ತೇರನ್ನೆಳೆಯುವ ಕೆಲ ನಿಮಿಷಗಳ ಮುಂಚೆ ಆಗಸದಲ್ಲಿ ಗರುಡಗಳು ಹಾರಾಡಿದವು.
ನೂತನ ದಂಪತಿಗಳೂ ಸೇರಿದಂತೆ ಜಾತ್ರೆಗೆ ಆಗಮಿಸಿದ ಭಕ್ತರು ಇಲ್ಲೇ ಸಿಗುವ ಹಣ್ಣು ಜವನವನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸಿದ್ದು ಕಂಡುಬಂದಿತು. ತೇರಿನ ನಂತರ ರಥಧಲ್ಲಿ ಕುಳ್ಳಿರಿಸಿದ್ದ ಉತ್ಸವ ಮೂರ್ತಿಯನ್ನು ವಿವಿಧ ಚಿನ್ನಾಭರಣಗಳಿಂದ ಅಲಂಕಾರಗೊಳಿಸಲಾಗಿತ್ತು. ಹರಕೆ ಹೊತ್ತ ಭಕ್ತರು ತಮ್ಮ ಮಂಟಪಗಳಲ್ಲಿ ಹಸಿರು ಚಪ್ಪರ ತಳಿರು ತೋರಣಗಳಿಂದ ಅಲಂಕರಿಸಿ ದೇವರ ಮೂರ್ತಿಯನ್ನು ಇಲ್ಲಿಟ್ಟು ಪೂಜೆ ಸಲ್ಲಿಸಿದರು. ದೇವರಿಗೆ ಚಿನ್ನಾಭರಣವನ್ನು ಹಾಕಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಬ್ರೇಕ್ ವಿಫಲ, ಅಲ್ಪದರಲ್ಲೇ ತಪ್ಪಿದ ಭಾರಿ ಅಪಾಯ ಬಿಳಿಗಿರಿಂಗನಬೆಟ್ಟಕ್ಕೆ ಕೆಎಸ್ಸಾರ್ಟಿಸಿ ವತಿಯಿಂದ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದರ ನಡುವೆ ಕೆಲವು ಖಾಸಗಿ ಬಸ್‌ಗಳು ಸಹ ಸಂಚರಿಸಿದವು. ಆದರೆ ಬೆಟ್ಟದಿಂದ ವಾಪಸ್ಸಾಗುವ ವೇಳೆ ಖಾಸಗಿ ಬಸ್ಸೊಂದು ಗವಿಬೋರೆ ಬಳಿ ಬ್ರೇಕ್ ವಿಫಲವಾಗಿ ಎದುರಿಂದ ಬರುತ್ತಿದ್ದ ೨ ಕಾರುಗಳಿಗೆ ಡಿಕ್ಕಿ ಹೊಡೆಯಿತು. ಅದೃಷ್ಟವಶಾತ್ ಬಸ್ ಅಲ್ಲೇ ನಿಂತಿದ್ದರಿಂದ ದೊಡ್ಡ ಅಪಾಯ ತಪ್ಪಿತು. ೫೦ ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಇದರಲ್ಲಿದ್ದರು. ಪಟ್ಟಣದ ನಾಡಮೇಗಲಮ್ಮ ದೇಗುಲದ ಮುಂಭಾಗ ವಿಶೇಷ ಬಸ್‌ಗಳ ಪ್ರಯಾಣಕ್ಕೆ ತಾತ್ಕಾಲಿಕ ನಿಲ್ದಾಣದ ವ್ಯವಸ್ಥೆಯನ್ನು ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಜನಜಂಗುಳಿ ನೆರೆದಿತ್ತು. ಅಲ್ಲದೆ ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆ ಹಾಗೂ ದೊಡ್ಡ ಅಂಗಡಿ ಬೀದಿಯ ರಸ್ತೆಯನ್ನು ಜಾತ್ರೆ ನಿಮಿತ್ತ ಬಸ್‌ಗಳಿಗೆ ತತ್ಕಾಲಿಕವಾಗಿ ಏಕ ಮುಖ ಸಂಚಾರದ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ, ಗಣ್ಯರಿಂದ ವಿಶೇಷ ಪೂಜೆ: ಶಾಸಕ ಎ.ಆರ್. ಕೃಷ್ಣಮೂರ್ತಿ ಕುಟುಂಬ ಸಮೇತ ರಥೋತ್ಸದ ಸಂದರ್ಭದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಗಡಿಯಲ್ಲ್ಲಿ ನಡೆಯುತ್ತಿರುವ ಭಾರತ ಪಾಕಿಸ್ತಾನದ ಯುದ್ಧದ ಭೀತಿಯ ಸಂದರ್ಭದಲ್ಲಿ, ದೇಶಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇನೆ. ದೇಗುಲಕ್ಕೆ ಸಾವಿರಾರು ಭಕ್ತರು ಬರುತ್ತಿದ್ದು ಇಲ್ಲಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಲು ನಾನು ಕ್ರಮ ವಹಿಸುತ್ತೇನೆ ಎಂದರು.
ಮಾಜಿ ಶಾಸಕ ಎಸ್. ಬಾಲರಾಜು, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ವಸಂತನಂಜುಂಡಸ್ವಾಮಿ, ಜಿಲ್ಲಾಧಿಕಾರಿ ಶಿಲ್ಪನಾಗ್, ಉಪವಿಭಾಗಾಧಿಕಾರಿ ಮಹೇಶ್, ಎಸ್‌ಪಿ ಕವಿತಾ, ಡಿವೈಎಸ್‌ಪಿ ಧರ್ಮೇಂದ್ರ, ಸಿಪಿಐ ಕೆ. ಶ್ರೀಕಾಂತ್, ಪಿಎಸ್‌ಐ ಆಕಾಶ್, ತಹಸೀಲ್ದಾರ್ ಬಸವರಾಜು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್ ಸದಸ್ಯರಾದ ಗುಂಬಳ್ಳಿ ರಾಜಣ್ಣ, ಕೇತಮ್ಮ, ಸ್ಪೂರ್ತಿ, ವೆಂಕಟರಾಮು, ಸಿದ್ದರಾಜು, ಎಂ. ಸುರೇಶ್, ಇಒ ಮೋಹನ್‌ಕುಮಾರ್, ಪಾರು ಪತ್ತೇದಾರ ರಾಜಣ್ಣ, ವೆಂಕಟೇಶ್ ಸೇರಿದಂತೆ ಅನೇಕರು ಇದ್ದರು.