ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿದ್ದ ವೈಮಾನಿಕ ದಾಳಿಯ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ಶಾಂತಿ ಮಾತುಕತೆಗೆ ಕೆಲವು ದೇಶಗಳು ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದವು. ಅದರಲ್ಲಿ ಅಮೆರಿಕ ಕೂಡ ಒಂದು. ಭಾರತದ ಜೊತೆ ಉತ್ತಮ ಸಂಬಂಧ ಹೊಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿ ಭಾರತ ತಮ್ಮ ಮೇಲೆ ದಾಳಿ ನಡೆಸುವುದನ್ನು ತಡೆಯಬೇಕೆಂದು ಪಾಕಿಸ್ತಾನದ ಪ್ರಧಾನಿ ಮನವಿ ಮಾಡಿದ್ದರು ಎಂಬ ಸುದ್ದಿಗಳು ಹರಿದಾಡಿದ್ದವು. ಇಂದು ಈ ಬಗ್ಗೆ ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಭಾರತ, ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ’ ಎಂದು ಹೇಳಿದ್ದಾರೆ. ಅಮೆರಿಕದ ಮಧ್ಯಸ್ಥಿಕೆ ಮಾತುಕತೆಗಳಿಂದಾಗಿ ಎರಡೂ ದೇಶಗಳು ದಾಳಿಯನ್ನು ನಿಲ್ಲಿಸಲು ಒಪ್ಪಿವೆ ಎನ್ನಲಾಗಿದೆ.
ಮಹತ್ವದ ರಾಜತಾಂತ್ರಿಕ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟನ್ನು ಬಗೆಹರಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಿದೆ. ದೀರ್ಘ ರಾತ್ರಿಯ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದಿದ್ದಾರೆ. ಡೊನಾಲ್ಡ್ ಟ್ರಂಪ್ ಭಾರತ-ಪಾಕಿಸ್ತಾನ ಎರಡೂ ರಾಷ್ಟ್ರಗಳು “ಸಾಮಾನ್ಯ ಜ್ಞಾನ ಮತ್ತು ಉತ್ತಮ ಬುದ್ಧಿವಂತಿಕೆ” ತೋರಿಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ. ದಿನಗಟ್ಟಲೆ ಉಲ್ಬಣಗೊಳ್ಳುತ್ತಿದ್ದ ಮಿಲಿಟರಿ ಸಂಘರ್ಷದ ನಂತರ ಯುದ್ಧವನ್ನು ನಿಲ್ಲಿಸಿ ಶಾಂತತೆಯನ್ನು ಪುನಃಸ್ಥಾಪಿಸುವ ಎರಡೂ ದೇಶಗಳ ನಿರ್ಧಾರವನ್ನು ಅವರು ಶ್ಲಾಘಿಸಿದರು.