ರಾಮನಗರ : 52,000 ಕೋಟಿ ರೂ. ಹಣವನ್ನು ಗ್ಯಾರಂಟಿಗಳ ಮೂಲಕ ಜನರಿಗೆ ತಲುಪಿಸುತ್ತಿದ್ದೇವೆ. ರಾಮನಗರದ ಮನೆಮನೆಗಳಿಗೆ ತೆರಳಿ, ಸಹಿ ಹಾಕಿ, ಗ್ಯಾರಂಟಿಯ ವಾಗ್ದಾನವನ್ನು ನಮ್ಮ ತಾಯಂದಿರಿಗೆ ನೀಡಿದ್ದೆವು. ಆ ವಾಗ್ದಾನ ಇಂದು ಈಡೇರಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್‌ರವರ 134ನೇ ಜಯಂತ್ಯೋತ್ಸವದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಬೆಳಗಾವಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ‘ಜೈ ಭಾಪು, ಜೈ ಭೀಮ್, ಜೈ ಸಂವಿಧಾನ್ʼ ಕಾರ್ಯಕ್ರಮದ ಮೂಲಕ ಸಂವಿಧಾನವೇ ಕಾಂಗ್ರೆಸ್ ಬದುಕು ಎಂಬುವುದನ್ನು ಸಾರಿದ್ದೇವೆ. ಅಂಬೇಡ್ಕರ್ ಅವರು ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿರಲಿಲ್ಲ, ಅವರು ಎಲ್ಲಾ ವರ್ಗದ ಏಳಿಗೆಗಾಗಿ ಶ್ರಮಿಸಿದವರು. ಹಾಗಾಗಿ ಇಂದು ಅವರ ಪ್ರತಿಮೆಗೆ ಪೂಜೆಯನ್ನು ಸಲ್ಲಿಸುತ್ತಿಲ್ಲ, ಬದಲಾಗಿ ಪ್ರತಿಭೆಗೆ ಪೂಜೆ ಸಲ್ಲಿಸುತ್ತಿದ್ದೇವೆ. ಆದ್ದರಿಂದ ದೇವರ ವಿಗ್ರಹದ ಹೊರತಾಗಿ, ಒಬ್ಬ ವ್ಯಕ್ತಿಯ ವಿಗ್ರಹವನ್ನು ಈ ದೇಶದಲ್ಲಿ ಅತಿ ಹೆಚ್ಚು ಕಾಣುತ್ತಿದ್ದೇವೆ ಎಂದರೆ, ಅದು ಬಾಬಾ ಸಾಹೇಬ್ ಅಂಬೇಡ್ಕರ್ ವಿಗ್ರಹ ಮಾತ್ರ. ಅಂಬೇಡ್ಕರರು ನೀಡಿದ ಸಂವಿಧಾನ ನಮ್ಮ ದೇಶದ ಪವಿತ್ರ ಗ್ರಂಥ. ಅದನ್ನು ರಕ್ಷಣೆ ಮಾಡುವುದು ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಕಾಂಗ್ರೆಸ್ ಪಕ್ಷ ಜನರ ಅಭ್ಯುದಯಕ್ಕಾಗಿ ಮೀಸಲಾತಿಯನ್ನು ಬೆಂಬಲಿಸುತ್ತಾ ಬಂದಿದೆ. ಚುನಾವಣಾ ಸಂದರ್ಭದಲ್ಲಿ ನೀಡಿದ ಮಾತನ್ನು ಉಳಿಸಿಕೊಂಡು, ಈಗ 52,000 ಕೋಟಿ ರೂ. ಹಣವನ್ನು ಗ್ಯಾರಂಟಿಗಳ ಮೂಲಕ ಜನರಿಗೆ ತಲುಪಿಸುತ್ತಿದ್ದೇವೆ. ರಾಮನಗರದ ಮನೆಮನೆಗಳಿಗೆ ತೆರಳಿ, ಸಹಿ ಹಾಕಿ, ಗ್ಯಾರಂಟಿಯ ವಾಗ್ದಾನವನ್ನು ನಮ್ಮ ತಾಯಂದಿರಿಗೆ ನೀಡಿದ್ದೆವು. ಆ ವಾಗ್ದಾನ ಇಂದು ಈಡೇರಿದೆ.
ನಾವು ರಾಮನಗರದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದೇವೆ. ಈ ಜಿಲ್ಲೆಯ ಎಲ್ಲಾ ಶಾಸಕರೂ ಅತ್ಯಂತ ಕ್ರಿಯಾಶೀಲರಾಗಿ ದುಡಿಯುತ್ತಿದ್ದಾರೆ. ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡಿ, ಈ ಜಿಲ್ಲೆಯನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಲಿದ್ದೇವೆ ಎಂದರು.