Tuesday, May 13, 2025
Google search engine

Homeರಾಜ್ಯಪಾಕ್‌ ಮೇಲೆ ನಡೆಸಿದ ಕಾರ್ಯಾಚರಣೆಯ ಕ್ರೆಡಿಟ್ ಸೇನೆಗೆ ಮಾತ್ರ ಸಲ್ಲಬೇಕು: ಸಿಎಂ ಸಿದ್ದರಾಮಯ್ಯ

ಪಾಕ್‌ ಮೇಲೆ ನಡೆಸಿದ ಕಾರ್ಯಾಚರಣೆಯ ಕ್ರೆಡಿಟ್ ಸೇನೆಗೆ ಮಾತ್ರ ಸಲ್ಲಬೇಕು: ಸಿಎಂ ಸಿದ್ದರಾಮಯ್ಯ

ಹೆಗ್ಗಡದೇವನಕೋಟೆ: ಪಾಕಿಸ್ತಾನದ ಮೇಲೆ ನಡೆಸಿದ ಕಾರ್ಯಾಚರಣೆಯ ಕ್ರೆಡಿಟ್ ಸಂಪೂರ್ಣವಾಗಿ ಸೇನೆಗೆ ಮಾತ್ರ ಸಲ್ಲಬೇಕು. ಯಾವ ಪಕ್ಷವೂ ಆ ಗೆಲುವು ನನ್ನದು ಎಂದು ಹಕ್ಕು ಚಲಾಯಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  ಅವರು ಇಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದರು. ಇವತ್ತು ಎರಡೂ ದೇಶಗಳ ಸೇನಾಧಿಕಾರಿಗಳ ಸಭೆ ಇದೆ. ಅಲ್ಲಿ ಏನು ತೀರ್ಮಾನ ಆಗುತ್ತದೆಯೋ ನೋಡೋಣ ಎಂದು ತಿಳಿಸಿದರು.

1971ರ ಯುದ್ಧಕ್ಕೂ ಇಂದಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಎರಡೂ ಸಂದರ್ಭಗಳನ್ನು ಹೋಲಿಸಿ ನಾನು ಮಾತನಾಡುವುದಿಲ್ಲ. ಆಗಿನ ಪರಿಸ್ಥಿತಿಗಳೇ ಬೇರೆ, ಇವತ್ತಿನ ಪರಿಸ್ಥಿತಿಗಳೇ ಬೇರೆ. ಟ್ರಂಪ್ ಟ್ವಿಟ್ ಬಗ್ಗೆಯಾಗಲೀ, ಪಾಕಿಸ್ತಾನದವರು ಮಾಡಿದ ಕದನ ವಿರಾಮ ಉಲ್ಲಂಘನೆಯ ಬಗ್ಗೆಯಾಗಲೀ ನಾನು ಪ್ರತಿಕ್ರಯಿಸುವುದಿಲ್ಲ ಎಂದರು.

ಯುದ್ಧ ವಿರಾಮ ಘೋಷಣೆಗೂ ಮುನ್ನ ಸರ್ವ ಪಕ್ಷಗಳ ಸಭೆ ಮತ್ತು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕಿತ್ತು. ಸರ್ವಪಕ್ಷ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಪ್ರಕಟಿಸಬಹುದಿತ್ತು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಹೊರಗೆ ಕಳುಹಿಸಿದ್ದೇವೆ‌. ಮೈಸೂರಿನಲ್ಲಿ ಮೂವರು ಮಕ್ಕಳು ಮಾತ್ರ ಇದ್ದಾರೆ. ಅವರನ್ನು ಹೊರಗೆ ಕಳುಹಿಸಲು ತಾಂತ್ರಿಕ ಸಮಸ್ಯೆ ಇದೆ‌. ಗಂಡ ಪಾಕಿಸ್ತಾನಿ, ಹೆಂಡತಿ ಮೈಸೂರಿನವರು. ಹೀಗಾಗಿ ಮಕ್ಕಳ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಇದೆ. ಆದ್ದರಿಂದ ಮಕ್ಕಳು ಮಾತ್ರ ಇಲ್ಲೇ ಇದ್ದಾರೆ ಎಂದು ಪ್ರತಿಕ್ರಿಯಿಸಿದರು.

ಸಚಿವ ಸಂಪುಟ ಪುನಾರಚನೆ ಬಗ್ಗೆ ಪ್ರಶ್ನೆ ಕೇಳುವ ಅವಶ್ಯಕತೆ ಇಲ್ಲ. ಆ ಕೆಲಸವನ್ನು ನೀವು ಮಾಡಲಾಗುವುದಿಲ್ಲಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಕೆಲಸವನ್ನು ನಾನೇ ಮಾಡಬೇಕು. ನಿಮಗೆ (ಮಾಧ್ಯಮದವರಿಗೆ) ಹೇಳಿಯೇ ಮಾಡುತ್ತೇನೆ ಎಂದರು.

ಸರ್ಕಾರದ ಎರಡು ವರ್ಷದ ಸಂಭ್ರಮಾಚರಣೆ ಮಾಡುತ್ತೇವೆ. ಯುದ್ಧ ವಿರಾಮ ಘೋಷಣೆ ಆಗಿರುವ ಕಾರಣ ಈ ಕಾರ್ಯಕ್ರಮ ನಡೆಸುತ್ತೇವೆ. ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ನಮ್ಮದು ಮಾತ್ರ. ಇದೇ ನಮ್ಮ ಸರ್ಕಾರದ ಯಶಸ್ಸು ಎಂದರು.

ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ಡಾ.ಡಿ. ತಿಮ್ಮಯ್ಯ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ಮುಖಂಡರಾದ ಸೀತಾರಾಮು, ಕೆ.ಮರೀಗೌಡ ಇದ್ದರು.

RELATED ARTICLES
- Advertisment -
Google search engine

Most Popular