ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ಯಶಸ್ವಿಯಾಗಿ ನಡೆಸಿದ ‘ಆಪರೇಷನ್ ಸಿಂಧೂರʼ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಸೇನೆಗೆ ಬೆಂಬಲ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಭಾರತ ರಕ್ಷಣಾ ಸಚಿವಾಲಯಕ್ಕೆ ಪ್ರಸಾದ ರೂಪದಲ್ಲಿ ₹25 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.
ಶ್ರೀಗಳ 13ನೇ ಪಟ್ಟಾಭಿಷೇಕ ಮಹೋತ್ಸವದಲ್ಲಿ ಅವರು ಹುತಾತ್ಮ ಯೋಧರಿಗೆ ಸದ್ಗತಿಯ ಪ್ರಾರ್ಥನೆ ಸಲ್ಲಿಸಿ, ಸೇನೆಯ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಅಲ್ಲದೇ, ಚಿಕ್ಕಮಗಳೂರು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ ₹10 ಲಕ್ಷ ದೇಣಿಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಅವರಿಗೆ ನೀಡಲಾಗಿದೆ. ಈ ವೇಳೆ ಧರ್ಮಕರ್ತ ಭೀಮೇಶ್ವರ ಜೋಶಿ ಚೆಕ್ ಹಸ್ತಾಂತರಿಸಿದರು.
ಕಾಪು ತಾಲ್ಲೂಕು ಮಜೂರು ಗ್ರಾಪಂ ವಾರ್ಷಿಕ ಬಜೆಟ್‌ನಲ್ಲಿ ₹10 ಲಕ್ಷ ಸೈನಿಕರ ಹಿತದೃಷ್ಟಿಯಿಂದ ಮೀಸಲಾಗಿದ್ದು, ಇದು ಎಲ್ಲ ಸದಸ್ಯರ ಒಪ್ಪಿಗೆಯಿಂದ ಅಳವಡಿಸಲಾಗಿದೆ ಎಂದು ಅಧ್ಯಕ್ಷ ಪ್ರಸಾದ್ ಶೆಟ್ಟಿ ತಿಳಿಸಿದರು.
ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಯ ನಿರ್ದೇಶನದಂತೆ ಕೊಲ್ಲೂರು ಸೇರಿದಂತೆ ರಾಜ್ಯದ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.