ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (CBSE) 12ನೇ ತರಗತಿ ಫಲಿತಾಂಶ ಮೇ 13 ರಂದು ಪ್ರಕಟವಾಗಿದ್ದು, ಈ ಬಾರಿ ಶೇಕಡಾ 88.39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಫಲಿತಾಂಶದ ನಡುವೆಯೇ, ಚಂಡೀಗಢದ ದೃಷ್ಟಿಹೀನ ವಿದ್ಯಾರ್ಥಿನಿ ಕಾಫಿ ಅತ್ಯಂತ ಗಮನಸೆಳೆದಿದ್ದಾಳೆ. ಮೂರನೇ ವಯಸ್ಸಿನಲ್ಲಿ ನೆರೆಮನೆಯವರಿಂದ ಆಸಿಡ್ ದಾಳಿಗೆ ಒಳಗಾಗಿ ದೃಷ್ಟಿ ಕಳೆದುಕೊಂಡರೂ ಸಹ, ಕಾಫಿ ಶೇಕಡಾ 95.6 ಅಂಕಗಳನ್ನು ಪಡೆದು ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್ ಕಾಲೇಜಿನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾಳೆ.
ಇದಕ್ಕೂ ಮೊದಲು 10ನೇ ತರಗತಿಯಲ್ಲಿ ಶೇ. 95.2 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಳು. ಕಾಫಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಆಡಿಯೋ ಪುಸ್ತಕಗಳು ಹಾಗೂ ಯೂಟ್ಯೂಬ್ ಮೂಲಕ ಎರಡರಿಂದ ಮೂರು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದಳು.
2016ರಲ್ಲಿ ಎಂಟನೇ ವಯಸ್ಸಿನಲ್ಲಿ ಶಾಲೆಗೆ ಸೇರಿದ ಈಕೆ, 2018ರಲ್ಲಿ ಲಿಖಿತ ಪರೀಕ್ಷೆ ಉತ್ತೀರ್ಣರಾದ ನಂತರ ನೇರವಾಗಿ 6ನೇ ತರಗತಿಗೆ ಸೇರಿಸಲಾಯಿತು. ಕಾಫಿಯ ಕನಸು ದೆಹಲಿ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಅಧ್ಯಯನ ಮಾಡಿ ಐಎಎಸ್ ಅಧಿಕಾರಿಯಾಗುವುದು. ಈಗಾಗಲೇ ದೆಹಲಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗೂ ಹಾಜರಾಗಿದ್ದು ಶೀಘ್ರದಲ್ಲೇ ಪ್ರವೇಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ ಕಾಫಿ.