ಬಾಗಲಕೋಟೆ: ತಾಳಿ ಕಟ್ಟಿದ ಹದಿನೈದೇ ನಿಮಿಷದಲ್ಲಿ ಹೃದಯಾಘಾತದಿಂದ ವರ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.
ಪ್ರವೀಣ ಕುರಣಿ (25) ಮೃತಪಟ್ಟ ವರ. ಜಮಖಂಡಿ ತಾಲೂಕಿನ ಕುಂಬಾರ ಹಳ್ಳ ಗ್ರಾಮದ ನಿವಾಸಿಯಾಗಿದ್ದು, ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು.
ಈ ಮಧ್ಯೆ ವೇದಿಕೆಯ ಮೇಲೆ ಬಂದು ಅಕ್ಷತೆ ಬಿದ್ದ ಹದಿನೈದು ನಿಮಿಷದ ಬಳಿಕ ವರ ಪ್ರವೀಣ ಕುರಣಿಗೆ ಹೃದಯಾಘಾತವಾಗಿದ್ದು ಅಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪ್ರವೀಣ ಕುರಣಿ ಹೊಸ ಜೀವನ ಆರಂಭವಾಗುವ ಮೊದಲೇ, ವಿಧಿ ಬದುಕಿಗೆ ಕೊನೇ ವಿದಾಯ ಹೇಳಿದೆ.