ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಲಾರಿಯ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಬಸ್ ಚಾಲಕ, ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ.
ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಳ ಕಾಲ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು, ಗುಂಡ್ಯ ಪೇಟೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಅಪಾಯಕಾರಿ ತಿರುವಿನಲ್ಲಿ ಎದುರಿನಿಂದ ವೇಗವಾಗಿ ಬರುತ್ತಿದ್ದ ಲಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಢಿಕ್ಕಿಯ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿಯ ಮುಂಭಾಗಕ್ಕೂ ಹಾನಿಯಾಗಿದೆ.
ಎರಡು ಘನ ವಾಹನಗಳು ಪರಸ್ಪರ ಢಿಕ್ಕಿ ಹೊಡೆದು ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳು ಸುಮಾರು 5 ಕಿಲೋಮೀಟರ್‌ಗೂ ಹೆಚ್ಚು ದೂರ ಸಾಲುಗಟ್ಟಿ ನಿಂತಿದ್ದವು. ಇದರಿಂದಾಗಿ ಪ್ರಯಾಣಿಕರು ವಿಶೇಷವಾಗಿ ಧರ್ಮಸ್ಥಳ, ಸುಬ್ರಹ್ಮಣ್ಯದಂತಹ ಯಾತ್ರಾಸ್ಥಳಗಳಿಗೆ ತೆರಳುತ್ತಿದ್ದವರು ಹಾಗೂ ಬೆಂಗಳೂರು, ಮಂಗಳೂರು ಕಡೆಗೆ ಸಾಗುತ್ತಿದ್ದವರು ತೀವ್ರ ತೊಂದರೆ ಅನುಭವಿಸಿದರು.