ರಾಮನಗರ:2025 ರ ವೇಳೆಗೆ ಕ್ಷಯ ಮುಕ್ತ ಸಮಾಜ ನಿರ್ಮಿಸುವ ಗುರಿ ಹೊಂದಿದ್ದು ಈ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಕ್ಷಯರೋಗ ಪತ್ತೆ ಮಾಡಿ ಚಿಕಿತ್ಸೆ ನೀಡುತ್ತಿದ್ದು ಜೊತೆಗೆ ವಿಶೇಷವಾಗಿ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಕಾರ್ಯಕ್ರಮದಡಿಯಲ್ಲಿ ಒಂದೇ ಸೂರಿನಡಿ ಹೆಚ್ಚಿನ ಜನರು ವಾಸಿಸುವಂತಹ ದುರ್ಗಮ, ಕೊಳಚೆ, ವಲಸೆ ಜನಾಂಗ ಇರುವ ಪ್ರದೇಶಗಳಲ್ಲಿ ಸಮೀಕ್ಷೆ ಮೂಲಕ ಕ್ಷಯರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶ ಹೊಂದಿದ್ದು ಈ ನಿಟ್ಟಿನಲ್ಲಿ ರಾಮನಗರ ಜಿಲ್ಲಾ ಕಾರಾಗೃಹ ಬಂಧಿನಿವಾಸಿಗಳಲ್ಲಿ ಕ್ಷಯರೋಗ ಪತ್ತೆ ಮಾಡುವ ಉದ್ದೇಶದಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು ಎಲ್ಲರೂ ತಪಾಸಣೆ ಮಾಡಿಸಿಕೊಂಡು ಕ್ಷಯ ಮುಕ್ತ ಸಮಾಜ ನಿರ್ಮಿಸಲು ಸಹಕರಿಸಬೇಕೆಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಕುಮಾರ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ ವತಿಯಿಂದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆ0ದೋಲನದ ಅಂಗವಾಗಿ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಬಂಧಿ ನಿವಾಸಿಗಳಲ್ಲಿ ಕ್ಷಯರೋಗ ಪತ್ತೆ ಮಾಡುವ ಸಲುವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಎಸ್. ಗಂಗಾಧರ್ ಅವರು ಮಾತನಾಡಿ, ಕ್ಷಯರೋಗ ಮೈಕೋಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿಸ್ ಎಂಬ ಸೂಕ್ಷಾಣುವಿಂದ ಬರುತ್ತದೆ. ಕ್ಷಯರೋಗಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರ ಬರುವ ತುಂತುರುಗಳಿ0ದ ಗಾಳಿಯ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಆದ್ದರಿಂದ ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ ಬಳಸುವಂತೆ ಸಲಹೆ ನೀಡಿದರು. 2 ವಾರಕ್ಕಿಂತ ಹೆಚ್ಚಿನ ಅವಧಿಯ ಸತತವಾದ ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಕಫದಲ್ಲಿ ರಕ್ತ ಬೀಳುವುದು, ಎದೆನೋವು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು, ಕ್ಷಯರೋಗದ ಮುಖ್ಯ ಲಕ್ಷಣಗಳಾಗಿದ್ದು ಮುಕ್ತವಾಗಿ ವೈದ್ಯರೊಂದಿಗೆ ಸಮಸ್ಯೆಗಳನ್ನು ತಿಳಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ರಾಕೇಶ್ ಕಂಬಾಳೆ ಅವರು ಮಾತನಾಡಿ, ಆರೋಗ್ಯ ಇಲಾಖಾ ವತಿಯಿಂದ ಬಂಧಿ ನಿವಾಸಿಗಳಿಗೆ ಅನೇಕ ಬಾರಿ ವಿವಿಧ ಆರೋಗ್ಯ ತಪಾಸಣೆ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇಂದು ವಿಶೇಷವಾಗಿ ಕ್ಷಯರೋಗ ಪತ್ತೆ ಮಾಡಲು ಶಿಬಿರ ಆಯೋಜಿಸಿದ್ದು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಟಿಒ ಡಾ. ಕುಮಾರ್ ಕೆ, ಜೈಲರ್‌ಗಳಾದ ಇಮಾಮ್ ಖಾಸಿಂ, ಪ್ರವೀಣ್ ಕುಮಾರ್ ಜಿಲ್ಲಾ ಸಂಯೋಜಕರು ವಿಶ್ವನಾಥ್, ಶೇಖರ್ ಮನೋಆಪ್ತ ಸಮಾಲೋಚಕರಾದ ಮೇಘನಾ ಕಾರಾಗೃಹದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇತರರು ಹಾಜರಿದ್ದರು.