ಬೆಂಗಳೂರು: ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಯಾವುದೇ ತಪ್ಪು ಮಾಡಿಲ್ಲ, ಅವರು ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಇನ್‌ಫೋರ್ಸ್‌ಮೆಂಟ್ ಡಿರೆಕ್ಟೊರೆಟ್ (ಇಡಿ) ದಾಳಿ ನಡೆಸಿದ ಹಿನ್ನೆಲೆಯಲ್ಲಿಯೇ ಈ ಪ್ರತಿಕ್ರಿಯೆ ಬಂದಿದ್ದು, ಈ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ.
ಡಾ. ಪರಮೇಶ್ವರ್ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಪರಮೇಶ್ವರ್ ಅವರು ಪ್ರಾಮಾಣಿಕ ವ್ಯಕ್ತಿ. ಅವರು ಯಾವುದೇ ತಪ್ಪು ಮಾಡಿಲ್ಲ. ಅವರು ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಶುದ್ಧ ಮನೋಭಾವದಿಂದ ಕೆಲಸ ಮಾಡಿದ್ದಾರೆ. ಮದುವೆ ಅಥವಾ ಸಮಾರಂಭಗಳಲ್ಲಿ ಉಡುಗೊರೆಗಳು ನೀಡುವುದು ಸಾಮಾನ್ಯ. ಇದರೊಂದಿಗೆ ಯಾವುದೇ ಅಪರಾಧದ ಸಂಬಂಧ ಇಲ್ಲ,” ಎಂದು ಹೇಳಿದರು.
ಇಡಿ ದಾಳಿ ಮತ್ತು ರನ್ಯಾ ರಾವ್ ಪ್ರಕರಣವನ್ನು ಪರಸ್ಪರ ಲಿಂಕ್ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, “ಅದೇ ಹೆಣ್ಣುಮಗಳು (ರನ್ಯಾ ರಾವ್) ತಪ್ಪು ಮಾಡಿದರೆ ಅದು ಆಕೆಯ ವೈಯಕ್ತಿಕ ವಿಚಾರ. ನಾವು ಕಾನೂನು ವಿರುದ್ಧವಾಗಿರೋದಿಲ್ಲ. ತಪ್ಪು ಸಾಬೀತಾದರೆ ಶಿಕ್ಷೆಯಾಗಲಿ. ಆದರೆ ಪರಮೇಶ್ವರ್ ಅವರಂತಹ ಪ್ರಭಾವಿ ವ್ಯಕ್ತಿ ಬೇರೆಯವರಿಗೆ ಸ್ಮಗ್ಲಿಂಗ್ ಮಾಡಲು ಹೇಳುತ್ತಾರೆ ಎಂಬುದು ನಂಬಲಾಗದ ಸಂಗತಿ,” ಎಂದು ಹೇಳಿದರು.
ಡಾ. ಪರಮೇಶ್ವರ್ ಅವರು ತಾವು ಯಾವಾಗಲೂ ಕಾನೂನಿಗೆ ಬದ್ಧರಾಗಿರುವ ವ್ಯಕ್ತಿಯಾಗಿದ್ದು, ಅವರ ವಿರುದ್ಧ ಯಾವುದೇ ಆರೋಪವಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. “ಅವರು ರಾಜ್ಯದ ಗೃಹ ಸಚಿವರು, ಎಂಟು ವರ್ಷ ಪಕ್ಷದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 1990ರಿಂದಲೂ ಅವರು ನನ್ನೊಂದಿಗೆ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರು ನಮಗೆ ಹೆಮ್ಮೆ ತಂದ ವ್ಯಕ್ತಿ,” ಎಂದು ಪ್ರಶಂಸಿಸಿದರು.
ಪರಮೇಶ್ವರ್ ಅವರಿಗೆ ತಮ್ಮ ಬೆಂಬಲವಿದೆ ಎಂದು ತಿಳಿಸಿದ ಉಪ ಮುಖ್ಯಮಂತ್ರಿ, “ನಾನು ಅವರ ಮನೆಗೆ ಹೋಗಿ ನೇರವಾಗಿ ಭೇಟಿಯಾಗಿ ಮಾತನಾಡಿದ್ದೇನೆ. ನಾವು ನಿಮ್ಮ ಪರವಾಗಿ ನಿಂತಿದ್ದೇವೆ ಎಂದು ಅವರಿಗೆ ತಿಳಿಸಿದ್ದೇನೆ,” ಎಂದರು.
ಡಾ. ಪರಮೇಶ್ವರ್ ಅವರ ಆರೋಗ್ಯದ ಕುರಿತು ಮಾಹಿತಿ ನೀಡಿದ ಅವರು, “ಅವರು ಚೆನ್ನಾಗಿದ್ದಾರೆ. ಅವರು ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲಿದ್ದಾರೆ,” ಎಂದು ತಿಳಿಸಿದರು.