Sunday, June 15, 2025
Google search engine

Homeಅಪರಾಧಬೆಂಗಳೂರಿನ ಹೋಟೆಲ್‌ನಲ್ಲಿ ನಕಲಿ ನೋಟು ಮುದ್ರಣ : 23 ವರ್ಷದ ಯುವಕನ ಬಂಧನ

ಬೆಂಗಳೂರಿನ ಹೋಟೆಲ್‌ನಲ್ಲಿ ನಕಲಿ ನೋಟು ಮುದ್ರಣ : 23 ವರ್ಷದ ಯುವಕನ ಬಂಧನ

ಬೆಂಗಳೂರು: ಬೆಂಗಳೂರು ನಗರದ ಕೇಂದ್ರೀಯ ವಾಣಿಜ್ಯ ಪ್ರದೇಶವೊಂದರಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ತೀವ್ರ ಸದ್ದು ಮಾಡಿದೆ. ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, ಟಸ್ಕರ್ ಟೌನ್‌ನಲ್ಲಿರುವ ಹೋಟೆಲ್ ರೂಮ್‌ನಲ್ಲಿ ನಕಲಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ 23 ವರ್ಷದ ಕ್ರಿಷ್ ಮಾಲಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಆರೋಪಿ ಜೂನ್ 1ರಂದು ಟಸ್ಕರ್ ಟೌನ್‌ನಲ್ಲಿರುವ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದ. ಆತ ತನ್ನ ಬ್ಯಾಗ್‌ನಲ್ಲಿ ಪ್ರಿಂಟರ್ ಹಾಗೂ ಸ್ಕ್ಯಾನರ್ ತಂದಿದ್ದು, ಹೋಟೆಲ್ ರೂಮ್‌ನಲ್ಲೇ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಕಲರ್ ಜೆರಾಕ್ಸ್ ಮೂಲಕ ಮುದ್ರಿಸುತ್ತಿದ್ದ. ಈ ಕ್ರಮವು ಆತನ ಎಲ್ಲ ಚಟುವಟಿಕೆಗಳನ್ನು ಹೋಟೆಲ್ ಸಿಬ್ಬಂದಿ ಮತ್ತು ಅಧಿಕಾರಿಗಳ ಗಮನಕ್ಕೆ ಬಾರದಂತೆ ನಡೆದಿತ್ತು.

ಬಳಿಕ ಜೂನ್ 7ರಂದು ಮಧ್ಯಾಹ್ನ ಹೋಟೆಲ್‌ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕವೇ 3 ಸಾವಿರ ರೂ. ಬಿಲ್ ಪಾವತಿಸಿ ತೆರಳಿದ್ದ. ಅದೇ ದಿನ ಬೆಳಗ್ಗೆ ಹೋಟೆಲ್‌ನಿಂದ ಸಂಗ್ರಹಿಸಲಾದ ತ್ಯಾಜ್ಯದಲ್ಲಿ ಕೆಲ ನಕಲಿ ನೋಟುಗಳು ಪತ್ತೆಯಾಗಿರುವುದನ್ನು ಪೌರಕಾರ್ಮಿಕ ಸಿಬ್ಬಂದಿ ಹೋಟೆಲ್ ಮ್ಯಾನೇಜರ್ ಬಳಿ ಹೇಳಿದ್ದ. ಆರೋಪಿಯ ಚೆಕ್ ಔಟ್ ಆದ ಕೆಲ ಸಮಯದ ಬಳಿಕ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಆತ ನೀಡಿದ್ದ ನೋಟುಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂದು ತಿಳಿದು ಬಂದಿತ್ತು.

ಬಳಿಕ ಆತ ತಂಗಿದ್ದ ರೂಮ್‌ನಲ್ಲಿ ಪರಿಶೀಲಿಸಿದಾಗ ಬಿಳಿ ಹಾಳೆಗಳ ಬಂಡಲ್, ನಕಲಿ ನೋಟ್​ನ ಚೂರುಗಳು ಪತ್ತೆಯಾಗಿದ್ದವು. ನಂತರ ಹೋಟೆಲ್ ಮ್ಯಾನೇಜರ್ ಮೊಹಮ್ಮದ್ ಷರೀಫ್ ಉದ್ದೀನ್ ಅವರು ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದರು. ಆರೋಪಿ ನೀಡಿದ್ದ ಆಧಾರ್‌ನಲ್ಲಿದ್ದ ವಿಳಾಸ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

RELATED ARTICLES
- Advertisment -
Google search engine

Most Popular