ಗುಂಡ್ಲುಪೇಟೆ: ತಾಲೂಕಿನಲ್ಲಿ ಕಳೆದ 4-5 ದಿನಗಳಿಂದಲೂ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಮನೆಯ ಗೋಡೆ ಕುಸಿತ ಕಂಡಿರುವ ಘಟನೆ ತಾಲೂಕಿನ ವಡ್ಡನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪುತ್ತನಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ವಡ್ಡನಹೊಸಹಳ್ಳಿ ಗ್ರಾಮದ ನಿವಾಸಿ ದೊಡ್ಡಶೆಟ್ಟಿ ಎಂಬುವರಿಗೆ ಸೇರಿದ ಮನೆ ಗೋಡೆ ಕುಸಿತ ಕಂಡಿದ್ದು, ಅಂಚುಗಳು ಸಹ ನೆಲಕ್ಕುರುಳಿದೆ. ಸಧ್ಯ ಘಟನೆಯಿoದ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಮಾಲೀಕರಿಗೆ ದಿಕ್ಕೆ ತೋಚದಂತಾಗಿದೆ.
ಮನೆ ಮಾಲೀಕ ದೊಡ್ಡಶೆಟ್ಟಿ ಕಡು ಬಡವರಾಗಿರುವ ಹಿನ್ನೆಲೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ಮನೆ ನಿರ್ಮಾಣಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.