ಗುಂಡ್ಲುಪೇಟೆ: ಪಟ್ಟಣದ ಕೆ.ಎಸ್.ನಾಗರತ್ನಮ್ಮ ಬಡಾವಣೆಯ ನಲ್ಲಿಗಳಲ್ಲಿ ಕಳೆದ 15 ದಿನಗಳಿಂದ ಮಣ್ಣು ಮಿಶ್ರಿತ ಹುಳುಗಳಿಂದ ಕೂಡಿದ ನೀರು ಪೂರೈಕೆಯಾಗುತ್ತಿರುವ ಕಾರಣ ಪುರಸಭೆ ಹಾಗು ಆಡಳಿತ ವರ್ಗದ ವಿರುದ್ಧ ನಿವಾಸಿಗರು ಆಕ್ರೋಶ ಹೊರ ಹಾಕಿದ್ದಾರೆ.
ಪಟ್ಟಣದ 4ನೇ ವಾರ್ಡ್‍ನ ಕೆ.ಎಸ್.ನಾಗರತ್ನಮ್ಮ ಬಡಾವಣೆಯ ನಲ್ಲಿಗಳ ಮೂಲಕ ಕಬಿನಿ ಮತ್ತು ಬೋರ್ ವೆಲ್ ನೀರು ಪೂರೈಕೆಯಾಗುತ್ತಿದ್ದು, ನೀರು ಸಂಪೂರ್ಣವಾಗಿ ಮಣ್ಣು ಮಿಶ್ರಿತವಾಗಿ ಕಲುಷಿತವಾಗಿದೆ. ಈ ನೀರನ್ನೆ ಜನರು ವಿಧಿ ಇಲ್ಲದೆ ಬಳಸುವುದರಿಂದ ಅನಾರೋಗ್ಯ ಭೀತಿ ಕಾಡತೊಡಗಿದೆ. ಇದರಿಂದ ಸ್ಥಳೀಯರು ಪುರಸಭೆಗೆ ಹಿಡಶಾಪ ಹಾಕುತ್ತಿದ್ದಾರೆ.
ಕುಡಿಯಲು ಯೋಗ್ಯವಲ್ಲದ ನೀರನ್ನು ಪುರಸಭೆಯವರು ನಲ್ಲಿಗಳ ಮೂಲಕ ಪೂರೈಕೆ ಮಾಡುತ್ತಿರುವ ಕುರಿತು ನಿವಾಸಿಗಳು ಹಲವು ಬಾರಿ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಸಹ ಪ್ರಯೋಜನವಾಗಿಲ್ಲ ಎಂದು ಎಂದು ಇಲ್ಲಿನ ನಿವಾಸಿಗರು ಆಕ್ರೋಶ ಹೊರಹಾಕಿದ್ದು, ಕಲುಷಿತ ನೀರಿನಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದರೆ ಅದಕ್ಕೆ ಪುರಸಭೆ ಅಧಿಕಾರಿಗಳೇ ಕಾರಣ ಎಂದು ಎಚ್ಚರಿಕೆ ನೀಡಿದ್ಧಾರೆ.
4ನೇ ವಾರ್ಡ್‍ಗೆ ಪುರಸಭೆ ವತಿಯಿಂದ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಅದು ಕೂಡ ಹುಳು ಮಿಶ್ರಿತವಾಗಿರುವ ಕಾರಣ ವಾಸನೆ ಬರುತ್ತಿದೆ. ಈ ನೀರು ಕುಡಿಯಲು ಯೋಗ್ಯವಾಗಿಲ್ಲದ ಕಾರಣ ಕೂಡಲೇ ಪುರಸಭೆ ಮುಖ್ಯಾಧಿಕಾರಿಗಳು ಕ್ರಮ ವಹಿಸಿ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಮುಂದಾಗಬೇಕು. ಇಲ್ಲದಿದ್ದರೆ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಾರ್ಡ್ ನಿವಾಸಿ ರಘು ಎಚ್ಚರಿಕೆ ನೀಡಿದ್ದಾರೆ.
4ನೇ ವಾರ್ಡ್ ನ ಕೆಲವು ಮನೆಗಳ ನಲ್ಲಿಗಳಲ್ಲಿ ಚರಂಡಿ ಮಿಶ್ರಿತ ನೀರು ಸರಬರಾಜಾಗುತ್ತಿದೆ ಎಂದು ದೂರ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು , ಹಳೆಯ ಪೈಪ್ ಲೈನ್ ಬದಲಿಸಿ ಹೊಸ ಪೈಪ್ ಲೈನ್ ಅಳವಡಿಸಿ ಶುದ್ಧ ನೀರು ಪೂರೈಕೆ ಮಾಡಲಾಗುವುದು.
– ವಸಂತ ಕುಮಾರಿ, ಮುಖ್ಯಾಧಿಕಾರಿ ಪುರಸಭೆ, ಗುಂಡ್ಲುಪೇಟೆ.