ರಾಮನಗರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯಿಂದಾಗಿ ಯಾವುದೇ ಬೆಳೆ ಹಾಗೂ ಜೀವ ಹಾನಿಯಾಗದಂತೆ ಕ್ರಮವಹಿಸಿ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ರಾಜ್ಯದ ಹವಮಾನ ಮತ್ತು ಮಳೆಬೆಳೆ ಸಂಬoಧಿತ ಸ್ಥಿತಿಗತಿಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರುಗಳು, ಶಾಸಕರುಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದರು.
ಕಳೆದ ಎರಡು ವರ್ಷಗಳಲ್ಲಿ ಆಗಿರುವಂತಹ ಪ್ರಾಣಹಾನಿ ಹಾಗೂ ಜಾನುವಾರು ಹಾನಿ, ಬೆಳೆಹಾನಿಗಳನ್ನು ಪರಿಶೀಲಿಸಿಕೊಂಡು ಈ ಬಾರಿ ಯಾವುದೇ ಹಾನಿಯಾಗದಂತೆ ಕ್ರಮವಹಿಸಲು ಸೂಚಿಸಿದರು. ಪ್ರವಾಹ ಸಂಭವ ಹೆಚ್ಚಾಗುವ ಹಿನ್ನೆಲೆಯಲ್ಲಿ ನದಿತೀರದ ಪ್ರದೇಶದ ಜನರನ್ನು ಸ್ಥಳಾಂತರ ಮಾಡುವಂತೆ ಕ್ರಮವಹಿಸಿ ಎಂದು ತಿಳಿಸಿದರು. ಪ್ರವಾಹ ಬರುವ ಮೊದಲೇ ಮುನ್ನೆಚ್ಚರಿಕೆಯಾಗಿ ಅಂಗನವಾಡಿ, ಶಾಲಾ-ಕಾಲೇಜು, ಆಸ್ಪತ್ರೆಗಳ ದುರಸ್ಥಿ ಸೇರಿದಂತೆ ಮಾನವ ಹಾಗೂ ಪ್ರಾಣಿ ಹಾನಿಯಾಗದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ರೈತರ ಆತ್ಮಹತ್ಯೆಯನ್ನು ತಡೆಯಲು ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು ಹಾಗೂ ರೈತರಿಂದ ಖಾಸಗಿ ಬಡ್ಡಿ ವ್ಯವಹಾರ ಮಾಡುತ್ತಿರುವವರು ಹೆಚ್ಚು ಹಣ ವಸೂಲಿ ಮಾಡುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಪಂಚಾಯತ್ ಮಟ್ಟದ ಅಧಿಕಾರಿಗಳು ಈ ಕುರಿತು ರೈತರ ಆತ್ಮಹತ್ಯೆಗಳ ಮೇಲೆ ನಿಗಾ ವಹಿಸುವಂತೆ ತಿಳಿಸಿದರು.
ಬಿಫರ್ ಜಾಯ್ ಚಂಡಮಾರುತದಿoದ ರಾಜ್ಯದಲ್ಲಿ ಈ ಬಾರಿ ಮುಂಗಾರು ತಡವಾಗಿ ಆಗಮಿಸಿದೆ. ಅಂಗನವಾಡಿ, ಶಾಲೆ ಮತ್ತು ಆಸ್ಪತ್ರೆಯ ದುರಸ್ಥಿ ಕುರಿತು ಪರಿಶೀಲಿಸಿ, ಶಾಲೆ, ಅಂಗನವಾಡಿ, ಆಸ್ಪತ್ರೆಯ ಕಟ್ಟಡಗಳು ಶಿಥಿಲಗೊಂಡಿದ್ದರೆ ಕೂಡಲೇ ದುರಸ್ಥಿಗೆ ಕ್ರಮವಹಿಸಿ, ಅಂಗನವಾಡಿಗಳಿಗೆ 2.50 ಲಕ್ಷ ರೂ.ಗಳು, ಶಾಲೆ ಮತ್ತು ಆಸ್ಪತ್ರೆಗಳಿಗೆ 2 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.
ಪ್ರಸಕ್ತ ಮುಂಗಾರು ಹಂಗಾಮು (ಜೂನ್ 1 ರಿಂದ 25ನೇ ಜುಲೈ) ಅನ್ವಯ ಉಂಟಾದ ಹಾನಿ ಮತ್ತು ನಷ್ಟದ ವಿವರ : ಪ್ರಸಕ್ತ ಮುಂಗಾರು ಹಂಗಾಮು (ಜೂನ್ 1 ರಿಂದ 25ನೇ ಜುಲೈ) ಅನ್ವಯ ರಾಜ್ಯದಲ್ಲಿ (ನೀರಿನ ಪ್ರವಾಹ 20, ಸಿಡಿಲು ಬಡಿತ 8, ಮನೆಕುಸಿತ 7, ಮರಬಿದ್ದು 2 ಹಾಗೂ ಭೂಕುಸಿತ 1) ಒಟ್ಟು 38 ಮಾನವ ಹಾನಿ ಪ್ರಕರಣಗಳು ವರದಿಯಾಗಿದ್ದು, 35 ಜನರು ಗಾಯಗೊಂಡಿದ್ದಾರೆ.
ರಾಜ್ಯದಲ್ಲಿ ಸಂಪೂರ್ಣವಾಗಿ 57 ಮನೆಗಳು, ತೀವ್ರವಾಗಿ 208 ಮನೆಗಳು ಹಾನಿಯಾಗಿದ್ದು, 2682 ಮನೆಗಳು ಭಾಗಶಃ ಹಾನಿಗೊಂಡಿದೆ.
ಈವರೆಗೆ ರಾಜ್ಯದಲ್ಲಿ ಉಂಟಾದ ಮಳೆಯಿಂದಾಗಿ ಒಟ್ಟು 105 ಜಾನುವಾರಗಳು ಮೃತಪಟ್ಟಿದ್ದು, 185 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾಗೂ 356.39 ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ಜಲಾವೃತಗೊಂಡಿದ್ದು ಒಟ್ಟು 541.39 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಜಲಾವೃತಗೊಂಡಿದೆ.
ಅಲ್ಲದೆ ಮೂಲಭೂತ ಸೌಲಭ್ಯಗಳಾದ ರಾಜ್ಯ ಹೆದ್ದಾರಿ (407 ಕಿ.ಮೀ) ಜಿಲ್ಲಾ ಹೆದ್ದಾರಿ (425 ಕಿ.ಮೀ) ಗ್ರಾಮೀಣ ರಸ್ತೆಗಳು (1277 ಕಿ.ಮೀ) ಒಟ್ಟು 2109 ಕಿ.ಮೀ ರಸ್ತೆ ಹಾಲಿಯಾಗಿದ್ದು, 189 ಸೇತುವೆಗಳು, 889 ಶಾಲಾ ಕೊಠಡಿಗಳು, 8 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 269 ಅಂಗನವಾಡಿ ಕೇಂದ್ರಗಳು, ಹಾನಿಯಾಗಿರುವುದು ವರದಿಯಾಗಿದೆ.
11,995 ವಿದ್ಯುತ್ ಕಂಬಗಳು, 894 ಟ್ರಾನ್ಸ್ಫಾರ್‌ಮರ್‌ಗಳು ಹಾನಿಗೊಂಡಿದ್ದು, 215 ಕಿ.ಮೀ ಉದ್ದದ ವಿದ್ಯುತ್ ಸಂಪರ್ಕವು ಕಡಿತಗೊಂಡಿದೆ ವರದಿ ನೀಡಿದರು.
ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಜಿಲ್ಲೆಯಲ್ಲಿ ಈ ಮಾಹೆಯಲ್ಲಿ ವಾಡಿಕೆಯಂತೆ ಮಳೆ ಆಗುತ್ತಿದ್ದು ಸಾರ್ವಜನಿಕರು ಹೆಚ್ಚು ನೀರು ಹರಿಯುತ್ತಿರುವ ಪ್ರದೇಶಗಳಿಗೆ ಹೋಗದಂತೆ ಹಾಗೂ ಕೆರೆ, ಕುಂಟೆ, ನದಿ, ಬಾವಿಗಳ ಬಳಿ ಹೋಗದಂತೆ ಹಾಗೂ ನದಿ ದಾಟದಂತೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಹಾಗೂ ವಿದ್ಯುತ್ ಕಂಬಗಳಿಗೆ ಪ್ರಾಣಿಗಳನ್ನು ಕಟ್ಟದಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ದಾರರುಗಳಾದ ಮಹೇಂದ್ರ, ತೇಜಸ್ವಿನಿ, ಸ್ಮಿತಾ, ಜಂಟಿ ಕೃಷಿ ನಿರ್ದೇಶಕರಾದ ರಾಮಕೃಷ್ಣ, ರೇಷ್ಮೆ ಉಪನಿರ್ದೇಶಕರಾದ ಬಸವರಾಜು, ತೋಟಗಾರಿಕೆ ಉಪನಿರ್ದೇಶಕರಾದ ಮುನೇಗೌಡ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.