Sunday, April 20, 2025
Google search engine

Homeಸ್ಥಳೀಯವಿದ್ಯಾರ್ಥಿಗಳು ಶಿಸ್ತು ರೂಡಿಸಿಕೊಳ್ಳಿ: ಮಂಜೇಗೌಡ

ವಿದ್ಯಾರ್ಥಿಗಳು ಶಿಸ್ತು ರೂಡಿಸಿಕೊಳ್ಳಿ: ಮಂಜೇಗೌಡ


ಮೈಸೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಜೀವನದಲ್ಲಿ ಶಿಸ್ತು, ಸಂಯಮ, ಛಲ, ಪ್ರಾಮಾಣಿಕತೆ ಬೆಳೆಸಿಕೊಂಡರೆ ಒಳ್ಳೆಯ ಪ್ರಜೆಗಳಾಗಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ತಿಳಿಸಿದರು.
ಚಾಮುಂಡಿಪುರಂನಲ್ಲಿರುವ ಬಾಲ ಬೋಧಿನಿ ಶಾಲೆಯಲ್ಲಿ ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಮಕ್ಕಳಿಗೆ ಉಚಿತ ರಕ್ತ ಗುಂಪು ಪರೀಕ್ಷೆ ಹಾಗೂ ಆರೋಗ್ಯ ಮತ್ತು ಸ್ವಚ್ಛತೆಯ ಜಾಗೃತಿ ಮೂಡಿಸಲಾಯಿತು. ೩೫ ಮಕ್ಕಳ ರಕ್ತದ ಗುಂಪು ಪರೀಕ್ಷೆ ಹಾಗೂ ಕ್ರೀಡಾ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳ ಮನಸ್ಸು ಅರಿತು ಬೋಧನೆ ಮಾಡಬೇಕು. ವಿದ್ಯಾರ್ಥಿಗಳು ಓದುವ ಸಮಯ ನಿಗದಿಪಡಿಸಿಕೊಳ್ಳಬೇಕು. ಓದಿದ್ದು ಮನನ ಮಾಡಿಕೊಳ್ಳಬೇಕು. ಹೆಚ್ಚು ಬರೆಯುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಆಸಕ್ತಿಯಿಂದ ಓದಿದಾಗ ಉತ್ತಮ ಅಂಕ ಗಳಿಸಬಹುದು ಎಂದು ಹೇಳಿದರು.
ವೈದ್ಯ ಸಂದೀಪ್ ಮಾತನಾಡಿ, ಮಕ್ಕಳ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಅವಶ್ಯ. ಪೋಷಕರು ಮಕ್ಕಳ ಕೈ ಮತ್ತು ಉಗುರುಗಳನ್ನು ಸ್ವಚ್ಛವಾಗಿಡಬೇಕು. ಕುಡಿಯಲು ಶುದ್ಧ ನೀರು ಉಪಯೋಗಿಸಬೇಕು. ನೈರ್ಮಲ್ಯ ಕಾಪಾಡಲು ಪ್ರತಿ ಮನೆಯಲ್ಲಿ ಶೌಚಾಲಯ ಬಳಕೆ ಮಾಡಬೇಕು. ಹಣ್ಣು, ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆದು ಬಳಕೆ ಮಾಡುವುದು ಸೂಕ್ತ. ಊಟದ ಮೊದಲು ಮತ್ತು ಶೌಚಾಲಯ ಬಳಸಿದ ನಂತರ ಕೈಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ಕಾಯಿಲೆ ಬಾರದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಆಗ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳ ಕಡೆಗೂ ಗಮನ ಹರಿಸಬೇಕು. ಮಾತೃಭಾಷೆಯೊಂದಿಗೆ ಇಂಗ್ಲೀಷ್ ಚೆನ್ನಾಗಿ ಕಲಿಯಬೇಕು. ಇಂಗ್ಲೀಷ್ ಕಲಿತವರು ಯಾವುದೇ ದೇಶದಲ್ಲಾದರೂ ಜೀವನ ಸಾಗಿಸಬಹುದು ಎಂದು ಹೇಳಿದರು.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಬೈರತಿ ಲಿಂಗರಾಜು, ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ್, ಉದ್ಯಮಿ ಜೈರಾಮ್, ದೂರ ರಾಜಣ್ಣ, ಶ್ರೀಕಾಂತ್ ಕಶ್ಯಪ್, ಆನಂದ್ ದಯಾನಂದ, ಸುಚೇಂದ್ರ, ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಹಾಜರಿದ್ದರು.

RELATED ARTICLES
- Advertisment -
Google search engine

Most Popular