ಮೈಸೂರು: ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಪೊಲೀಸ್ ಮಹಾನಿರ್ದೇಶಕರಿಗೆ ಆಗ್ರಹಿಸಿದೆ.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪರಶುರಾಮ್ ಎಂ.ಎಲ್ ಹಾಗೂ ಕಾರ್ಯದರ್ಶಿ ಸ್ಟ್ಯಾನ್ಲಿ ಕೆ.ವಿ ಅವರು ಈ ಕುರಿತು ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. , ‘ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ರವರು ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ’ ಎಂದು ಬಿಜೆಪಿಯ ಎನ್.ರವಿಕುಮಾರ್ ಹೇಳಿಕೆ ನೀಡಿದ್ದು”ರಾಜ್ಯ ಮಹಿಳಾ ಅಧಿಕಾರಿಯೊಬ್ಬರ ವಿರುದ್ಧ ಈ ರೀತಿ ಟೀಕೆ ಮಾಡುವುದು ಅಸಹನೀಯ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದು, ಮಹಿಳೆಯರ ಘನತೆಗೆ ಧಕ್ಕೆ ತರುತ್ತಿದೆ” ಎಂದು ತಿಳಿಸಿದ್ದಾರೆ.
ಹೆಣ್ಣು ಮಕ್ಕಳು ಸರ್ಕಾರದಲ್ಲಿ ಗೌರವದ ಕೆಲಸ ಮಾಡುತ್ತಿರುವಾಗ, ಈ ರೀತಿಯ ಹೇಳಿಕೆಗಳು ಅವರಿಗೆ ಮನೋವೈಕಲ್ಯ ಉಂಟುಮಾಡುವ ಸಾಧ್ಯತೆ ಇದೆ. ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿ ಸೂಕ್ತ ತನಿಖೆ ನಡೆಸಬೇಕೆಂದು ಒಡನಾಡಿ ಸಂಸ್ಥೆ ಒತ್ತಾಯಿಸಿದೆ.
35 ವರ್ಷಗಳಿಂದ ಮಹಿಳಾ ಸಬಲೀಕರಣದ ಹೋರಾಟದಲ್ಲಿ ನಿರತರಾಗಿರುವ ಈ ಸಂಸ್ಥೆಯು, ಈ ಹೇಳಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.