ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಸಾಲಿಗ್ರಾಮ ಮತ್ತು ಕೆ. ಆರ್. ನಗರ ತಾಲೂಕಿನ ಕಾವೇರಿ ನದಿ ಪಾತ್ರದ ನಾಲೆಗಳಿಗೆ ಜುಲೈ 17 ರಿಂದ ನೀರು ಹರಿಯ ಬಿಡಲಾಗುತ್ತದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಬೀಚನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಹಂಪಾಪುರ ಸಾಲಿಗ್ರಾಮ ಮುಖ್ಯ ರಸ್ತೆಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ನೀರು ಹರಿಯ ಬಿಡುವ ಮುನ್ನ ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ನಾಲೆಯ ಏರಿಗಳ ಮೇಲೆ ಸಂಚರಿಸಿ ಸರಾಗವಾಗಿ ನೀರು ಹರಿದು ಹೋಗುವಂತೆ ಹೂಳು ತೆಗೆಸಬೇಕೆಂದು ಸೂಚಿಸಿದರು.
ಬೀಚನಹಳ್ಳಿ ಕೊಪ್ಪಲು ಗ್ರಾಮ ಸಂಪರ್ಕ ರಸ್ತೆ ಕಾಮಗಾರಿಗೆ 2.5 ಕೋಟಿ ಹಣ ಮಂಜೂರಾಗಿದ್ದು 1.5 ಕಿ.ಮೀ ದೂರದ ರಸ್ತೆಯಲ್ಲಿ 1 ಕಿ.ಮೀ. ಡಾಂಬರು ಮತ್ತು ಉಳಿದ 0.5 ಕಿ.ಮೀ ಸಿಮೆಂಟ್ ರಸ್ತೆ ಮಾಡಲಾಗುತ್ತದೆ ಎಂದರು.
ಕೆ. ಆರ್. ನಗರ ತಾಲೂಕಿನ ಹೊಸ ಅಗ್ರಹಾರ ಮತ್ತು ಸಾಲಿಗ್ರಾಮ ತಾಲೂಕಿನ ಮಿರ್ಲೆ ಹೋಬಳಿ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳ ಎಲ್ಲಾ ಕೆರೆಗಳಿಗೂ ಕಾವೇರಿ ನದಿಯಿಂದ ನೀರು ತುಂಬಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ 50 ಕೋಟಿ ಹಣ ನೀಡಲಿದೆ ಎಂದರು.
ನಾನು ಶಾಸಕನಾಗಿ ಆಯ್ಕೆಯಾದ ಕಳೆದ 2 ವರ್ಷಗಳ ಅವಧಿಯಲ್ಲಿ ಜಾತಿ ಮತ್ತು ಪಕ್ಷ ರಾಜಕಾರಣ ಮಾಡದೆ ಕ್ಷೇತ್ರದಾಧ್ಯಂತ ಅಭಿವೃದ್ದಿ ಕೆಲಸ ಮಾಡುತ್ತಿದ್ದು ಇದಕ್ಕೆ ಸರ್ವರೂ ಸಹಕಾರ ನೀಡಬೇಕು ಎಂದು ಕೋರಿದರು.
ಜನರ ತೆರಿಗೆಯ ಹಣದಲ್ಲಿ ನಡೆಯುವ ಸರ್ಕಾರದ ಸಾರ್ವಜನಿಕ ಕಾಮಗಾರಿಗಳನ್ನು ಗ್ರಾಮಸ್ಥರು ಪರಿಶೀಲನೆ ಮಾಡಿ ಕಳಪೆ ಗುಣಮಟ್ಟ ಕಂಡು ಬಂದಲ್ಲಿ ಅಧಿಕಾರಿಗಳಿಗೆ ಮತ್ತು ನನಗೆ ದೂರು ನೀಡಬೇಕೆಂದು ನುಡಿದ ಶಾಸಕರು ಈ ವಿಚಾರದಲ್ಲಿ ನಾಗರಿಕರು ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಬೀಚನಹಳ್ಳಿ ಗೇಟ್ ಬಳಿ ಈ ಭಾಗದಲ್ಲಿ ಸಂಚರಿಸುವ ಎಲ್ಲಾ ಸಾರಿಗೆ ಬಸ್ಸುಗಳ ನಿಲುಗಡೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಡಿ. ರವಿಶಂಕರ್ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕೆಂದು ಆದೇಶಿಸಿದರು.
ಹಂಪಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಪಿ.ಪ್ರಶಾಂತ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಣಿಬಾಲಚಂದ್ರ, ಕ್ಷೇತ್ರದ ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಗ್ರಾ.ಪಂ.ಸದಸ್ಯರಾದ ಯೋಗೆಶ್ ಸುಜಾತ, ಅರುಣ್, ಜಲ ಸಂಪನ್ಮೂಲ ಇಲಾಖೆಯ ಸಾಲಿಗ್ರಾಮ ವಿಭಾಗದ ಕಾರ್ಯಪಾಲಕ ಅಭಿಯಂತರ ಕುಶಕುಮಾರ್, ಕೆ.ಆರ್.ನಗರ ಉಪ- ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಅಯಾಜ್ ಪಾಷಾ, ಪಂಚಾಯತ್ ರಾಜ್ ಉಪ-ವಿಭಾಗದ ಸಹಾಯಕ ಅಭಿಯಂತರ ರವಿಕುಮಾರ್, ಗ್ರಾಮದ ಮುಖಂಡರಾದ ಸುರೇಶ್, ಕೆಂಪೇಗೌಡ, ಯಶವಂತ್, ಮಹದೇವ ಮತ್ತಿತರರು ಇದ್ದರು.