ಬೆಂಗಳೂರು: ಮಕ್ಕಳಲ್ಲಿ ಹೃದಯ ಸಮಸ್ಯೆಗಳನ್ನು ತಡವಾಗಿ ಪತ್ತೆಹಚ್ಚದಂತೆ ತಡೆಗಟ್ಟಲು ಶಾಲಾ ಹಂತದಲ್ಲಿಯೇ ಹೃದಯ ಆರೋಗ್ಯ ತಪಾಸಣೆಗೆ ರಾಜ್ಯ ಸರ್ಕಾರ ಹೊಸ ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕಾಲೇಜು ಹಂತಕ್ಕೂ ವಿಸ್ತರಿಸಲು ಉದ್ದೇಶಿಸಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಹೃದಯಾಘಾತ ಪ್ರಕರಣಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಾ, “ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಎಲ್ಲ ಜಿಲ್ಲಾಡಳಿತಕ್ಕೂ ನಿರ್ದೇಶನ ನೀಡಲಾಗಿದೆ. ಹೃದಯಾಘಾತದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ರಾಜ್ಯದಲ್ಲಿ ಆಧುನಿಕ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಇತ್ತೀಚಿನ ಹೃದಯಾಘಾತ ಮರಣಗಳ ಕುರಿತು ಪರಿಶೀಲನೆಗಾಗಿ ತಜ್ಞರ ಸಮಿತಿ ರಚಿಸಲಾಗಿದೆ.
“ಹೃದಯಾಘಾತಕ್ಕೆ ಆಹಾರ ಪದ್ಧತಿ ಬದಲಾವಣೆ, ಬದಲಾದ ಜೀವನ ಶೈಲಿ, ವಂಶ ಪಾರ್ಯಂಪಾರ್ಯ ಹೀಗೆ ಹತ್ತು ಹಲವು ಕಾರಣಗಳಿವೆ. ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆಯಲು ಮೃತಪಟ್ಟ ಕುಟುಂಬದ ಮನ ಒಲಿಸಿ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಾರದ ಒಳಗಾಗಿ ಹಾಸನ ಜಿಲ್ಲೆಗೆ ಹೆಚ್ಚುವರಿ ಹೃದ್ರೋಗ ತಜ್ಞ ವೈದ್ಯರ ನೇಮಕ, ಅಗತ್ಯ ಇರುವ ವೈದ್ಯಕೀಯ ಉಪಕರಣಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು. ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಅಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ ಇದರ ಬಗ್ಗೆ ಜನರಲ್ಲಿ ಗೊಂದಲ ಬೇಡ ಎಂದರು.