ಬೆಂಗಳೂರು: ಚಿನ್ನದ ವ್ಯಾಪಾರಿಗೆ ಸುಮಾರು 9.82 ಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಂಸದ ಡಿ.ಕೆ.ಸುರೇಶ್ ಇಂದು ಜಾರಿ ನಿರ್ದೇಶನಾಲಯ (ಇ.ಡಿ)ದ ವಿಚಾರಣೆಗೆ ಒಳಗಾದರು. ನಗರದ ಶಾಂತಿನಗರದಲ್ಲಿರುವ ಇ.ಡಿ. ಕಚೇರಿಗೆ ತೆರಳಿದ್ದ ಸುರೇಶ್ ರನ್ನು ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಿದರು.
ವಿಚಾರಣೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನಗೂ ಐಶ್ವರ್ಯಾ ಗೌಡಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಹೀಗಿದ್ದೂ ಅವರ ವಂಚನೆ ಪ್ರಕರಣಕ್ಕೆ ನನ್ನನ್ನು ಹೇಗೆ ತಳಕು ಹಾಕುತ್ತಿದ್ದಾರೆ ಎಂಬುದು ಗೊತ್ತಾಗಿಲ್ಲ. ಅವರು ತನಿಖೆ ನಡೆಸುತ್ತಿದ್ದಾರೆ, ನಡೆಸಲಿ. ನಾನು ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದರು. ‘ಆಸ್ತಿಗೆ ಸಂಬಂಧಿಸಿದ ಮಾಹಿತಿ ಮತ್ತು ದಾಖಲೆ ಗಳನ್ನು ಅಧಿಕಾರಿಗಳು ಕೇಳಿದ್ದರು, ನೀಡಿದ್ದೇನೆ. ಅವರ ವಿಚಾರಣೆಗೆ ಸಹಕರಿಸಿದ್ದೇನೆ’ ಎಂದು ಡಿ.ಕೆ.ಸುರೇಶ್ ಹೇಳಿದರು.